ಶನಿವಾರಸಂತೆ, ಮೇ ೧೧: ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮ ದೇವಾಂಗ ಸಂಘದ ವತಿಯಿಂದ ತಾ. ೧೬ ಮತ್ತು ೧೭ರಂದು ನಡೆಯಲಿದೆ.
ತಾ.೧೬ರಂದು ಬೆಳಿಗ್ಗೆ ೮ ಗಂಟೆಗೆ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆ, ಮೂಲ ಸನ್ನಿಧಾನದಲ್ಲಿ ಪಂಚಾಮೃತ ಸಹಿತ ಮಹಾಭಿಷೇಕ, ನಂತರ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ನಡೆಯಲಿದೆ.
ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ೨ ಗಂಟೆಗೆ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ರಜತ ರಥದಲ್ಲಿ ಪ್ರತಿಷ್ಠಾಪಿಸಿ, ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು.
ಸಂಜೆ ೬.೩೦ಕ್ಕೆ ಮೂಲ ಸನ್ನಿಧಾನದಲ್ಲಿ ಅಮ್ಮನವರಿಗೆ “ಸಹಸ್ರ ಕುಂಕುಮಾರ್ಚನೆ’’, ೭.೩೦ಕ್ಕೆ ಅಷ್ಟವಧಾನ ಸೇವೆ, ೮ ಗಂಟೆಗೆ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಸುಗ್ಗಿ ಕುಣಿತ ಮತ್ತು ಸಿಡಿಮದ್ದಿನ ಪ್ರದರ್ಶನವಿರಲಿದೆ.
ತಾ.೧೭ರಂದು ಮುಂಜಾನೆ ೫ ಗಂಟೆಗೆ ಅಮ್ಮನವರನ್ನು ರಜತ ರಥದಲ್ಲಿ ವಾದ್ಯ ಸಮೇತ ಗಂಗಾ ಸ್ನಾನಕ್ಕೆ ತರಲಾಗುತ್ತದೆ. ಮತ್ತೆ ಪಂಚ ಕಲಶಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುವುದು.
ಬೆಳಿಗ್ಗೆ ೮ ಗಂಟೆಗೆ ಕೆಂಡೋತ್ಸವ, ೯ ಗಂಟೆಗೆ ದೇವಾಲಯ ಪ್ರವೇಶ, ಅಮ್ಮನವರಿಗೆ ಕುಂಕುಮಾರ್ಚಚನೆ, ಮಹಾಮಂಗಳಾರತಿ, ನಂತರ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಪೂಜಾ ಕೈಂಕರ್ಯಗಳು ದೇವಾಲಯ ಅರ್ಚಕ ಕೆ.ಎಸ್.ಪ್ರಸನ್ನ ಭಟ್ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀಬನಶಂಕರಿ ದೇವಾಲಯ ಸಮಿತಿ ಹಾಗೂ ದೇವಾಂಗ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.