ಸೋಮವಾರಪೇಟೆ, ಮೇ ೧೧: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತದಾನ ನಿನ್ನೆಯಷ್ಟೇ ಮುಗಿದಿದ್ದು, ಇಂದು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವಿಶ್ರಾಂತಿಯ ನಡುವೆಯೂ ಮತಾವಲೋಕನದಲ್ಲಿ ಮುಳುಗಿದ್ದರು. ಜೆಡಿಎಸ್ ಕಾರ್ಯಕರ್ತರಂತೂ ತಮ್ಮ ಅಭ್ಯರ್ಥಿಯ ಮೇಲಿನ ಆಕ್ರೋಶವನ್ನು ಮುಂದುವರೆಸಿದ್ದರು.
ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದು ತಮ್ಮ ನಿವಾಸಕ್ಕೆ ಆಗಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸೋಮವಾರಪೇಟೆ ಬಿಜೆಪಿ ಕಚೇರಿಗೆ ಆಗಮಿಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಕ್ಷೇತ್ರದ ಪ್ರತಿಯೊಂದು ಮತಗಟ್ಟೆಗಳಲ್ಲಿ ನಡೆದಿರುವ ಮತದಾನದ ವಿವರ, ಬಿಜೆಪಿಗೆ ಲಭಿಸಬಹುದಾದ ಮತಗಳ ಮಾಹಿತಿಯನ್ನು ಪಡೆಯುತ್ತಿದ್ದರು. ಕಾರ್ಯಕರ್ತರೊಂದಿಗೆ ನಗುಮುಖದೊಂದಿಗೆ ಮಾತುಕತೆ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರು ನಗರೂರಿನಲ್ಲಿರುವ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ನಡೆಸಿದರು. ಯಾವೆಲ್ಲಾ ಬೂತ್ಗಳಲ್ಲಿ ಕಾಂಗ್ರೆಸ್ ಪರವಾಗಿ ಹೆಚ್ಚು ಮತದಾನ ನಡೆದಿದೆ ಎಂಬ ಬಗ್ಗೆ ಮಾಹಿತಿ ಪಡೆದರು.
ಹಲವಷ್ಟು ಕಾರ್ಯಕರ್ತರು ಮಂಥರ್ ಗೌಡ ಅವರ ಮನೆಗೆ ಭೇಟಿ ನೀಡಿ ತಮ್ಮ ಬೂತ್ಗಳಲ್ಲಿ ನಡೆದ ಮತದಾನದ ಪ್ರಮಾಣ, ಕಾಂಗ್ರೆಸ್ಗೆ ಲಭಿಸಬಹುದಾದ ಮತಗಳ ವಿವರವನ್ನು ಒದಗಿಸಿದರು. ಎಲ್ಲಾ ಕಾರ್ಯಕರ್ತರನ್ನೂ ಆತ್ಮೀಯವಾಗಿ ಮಾತನಾಡಿಸಿದರು.
ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಕೂಡ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಕೂಡ ಮತದಾನ ವಿವರದ ಬಗ್ಗೆ ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸಿದರು.
ಜೆಡಿಎಸ್ ಕಾರ್ಯಕರ್ತರಲ್ಲಿ ಆಕ್ರೋಶ: ಜಾತ್ಯತೀತ ಜನತಾ ದಳದ ಅಭ್ಯರ್ಥಿಯಾಗಿರುವ ನಾಪಂಡ ಮುತ್ತಪ್ಪ ಅವರ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಇಂದೂ ಸಹ ಮುಂದುವರೆಯಿತು. ಕೊನೆ ಘಳಿಗೆಯಲ್ಲಿ ಕಾರ್ಯಕರ್ತರ ಕೈಗೆ ಸಿಗದೇ ತಟಸ್ಥರಾಗಿ ಉಳಿದ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಚುನಾವಣೆ ಘೋಷಣೆಗೂ ಮುನ್ನವೇ ಹಲವಷ್ಟು ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೇರ್ಪಡೆಗೊಂಡಿದ್ದರೂ ನಾವುಗಳು ಪಕ್ಷ ನಿಷ್ಠೆಯಿಂದ ಜೆಡಿಎಸ್ನಲ್ಲಿಯೇ ಉಳಿದಿದ್ದೆವು. ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪರವಾಗಿಯೇ ಪ್ರಚಾರವನ್ನೂ ನಡೆಸುತ್ತಿದ್ದೆವು. ಈ ಬಾರಿ ಪ್ರಬಲ ಪೈಪೋಟಿ ನೀಡುವ ಮಟ್ಟಕ್ಕೆ ತಲುಪಿದ್ದೆವು. ಕೊನೆ ಕ್ಷಣದಲ್ಲಿ ನಮ್ಮ ಅಭ್ಯರ್ಥಿಯೇ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಮತಗಟ್ಟೆಯಲ್ಲಿ ಮುಖ ತೋರಿಸಲೂ ಆಗಲಿಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದರು.
ಇನ್ನು ಸಿಪಿಎಂ ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಚುನಾವಣೆ ನಡೆದೇ ಇಲ್ಲವೇನೋ ಎಂಬAತೆ ತಮ್ಮ ದಿನಚರಿಯನ್ನು ಮುಂದುವರೆಸಿದರು.
ಕೊನೆ ಘಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ತಟಸ್ಥರಾಗಿ ಉಳಿದಿದ್ದರಿಂದ ಮತಗಟ್ಟೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ನಡೆಸಲು ಕಾರ್ಯಕರ್ತರು ಇರಲಿಲ್ಲ. ಬಹುತೇಕ ಬೂತ್ಗಳಲ್ಲಿ ಬೂತ್ ಏಜೆಂಟರೂ ಇರಲಿಲ್ಲ. ಈ ಬಗ್ಗೆ ಭಾರೀ ಚರ್ಚೆಯಾಗಿದ್ದು, ಜೆಡಿಎಸ್ ಅಭ್ಯರ್ಥಿಯ ಈ ನಡೆಯಿಂದ ಯಾರಿಗೆ ಲಾಭ-ಯಾರಿಗೆ ನಷ್ಟ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.