ಮಡಿಕೇರಿ, ಮೇ ೧೧: ಭಾರೀ ಕುತೂಹಲ ಕೆರಳಿಸಿದ್ದ ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತ ವಾಗಿ ಮುಗಿದಿದೆ. ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಿರುವ ಮತದಾರ ಫಲಿತಾಂಶ ಕ್ಕಾಗಿ ಕಾಯುತ್ತಿದ್ದಾನೆ. ಚುನಾವಣೆ ಯನ್ನು ಸುಲಲಿತವಾಗಿ ನಿರ್ವಹಿಸಿದ ಅಧಿಕಾರಿ ವರ್ಗದವರು ಎಣಿಕಾ ಕಾರ್ಯದ ಸಿದ್ಧತೆಯಲ್ಲಿದ್ದಾರೆ. ಇತ್ತ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಮಾತ್ರ ಮತ ಲೆಕ್ಕಾಚಾರದಲ್ಲಿದ್ದಾರೆ. ಪ್ರಾಮಾಣಿಕ ಮತಗಳಿಗಿಂತ ರಾತ್ರಿಯಿಡಿ ಹಂಚಿದ ಹಣದಲ್ಲಿ ಎಷ್ಟು ಮತ ಬರಬಹುದೆಂಬದು ಮತ್ತೊಂದು ಲೆಕ್ಕಾಚಾರವಾಗಿದೆ..!
ಚುನಾವಣೆಯ ಹಿಂದಿನ ದಿನ, ಅಂದರೆ ತಾ. ೯ ರಂದು ಎರಡೂ ಕ್ಷೇತ್ರಗಳಲ್ಲಿ ರಾತ್ರಿ ಪೂರಾ ಕುರುಡು ಕಾಂಚಾಣ ಕುಣಿದಾಡಿದೆ. ಗುಂಪು ಮನೆಗಳು, ಕಾಲೋನಿಗಳು, ಬಡವರ್ಗದವರು ನೆಲೆಸಿರುವ ಕಡೆಗಳಲ್ಲೆಲ್ಲ ಅಭ್ಯರ್ಥಿಗಳ ಪರ ವಿಶೇಷ ಕೆಲಸಗಾರರು ಹಣ ಹಂಚಿರುವ ವಿಚಾರ ಜಗಜ್ಜಾಹೀರಾಗಿದೆ. ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ವರನ್ನು ಎಬ್ಬಿಸಿ ಮತವೊಂದಕ್ಕೆ ರೂ. ೧ ಸಾವಿರದಿಂದ ಮೂರು ಸಾವಿರದವರೆಗೂ ಹಣ ನೀಡಲಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಅಭ್ಯರ್ಥಿಗಳ ಪರವಾಗಿ ನೆರೆ ಜಿಲ್ಲೆಯವರು ಹಣ ಹಂಚಿಕೆಯಲ್ಲಿ ಭಾಗಿಯಾಗಿದ್ದುದು ಕೊಡಗು ಚುನಾವಣೆಯ ಮತ್ತೊಂದು ಬೆಳವಣಿಗೆಯಾಗಿದೆ. ಹೊರಗಿನವರು ಬಂದು ಹಣದ ಚೀಲದಲ್ಲಿ ಕೈಯಾಡಿಸಿರುವದು ಕೆಲವು ನಿಷ್ಠಾವಂತ ಕಾರ್ಯಕರ್ತರಲ್ಲಿ ಬೇಸರವನ್ನೂ ಮೂಡಿಸಿದೆಯಂತೆ..! ಅಸಮಾಧಾನಿತರಾದ ಕೆಲವರು ಬೇರೆ ಪಕ್ಷದ ಅಭ್ಯರ್ಥಿ ಪರ ಬೆರಳಿಗೆ ಶಾಯಿ ಹಾಕಿಸಿಕೊಂಡಿದ್ದಾರೆAದೂ ಹೇಳಲಾಗುತ್ತಿದೆ..!
ಹಣ ಪಡೆದ ಮತದಾರ ತನ್ನ ಮತವನ್ನು ಮಾರಿಕೊಂಡಿದ್ದಾನೋ ಅಥವಾ ನಿದ್ದೆಯ ಮಂಪರಿನಲ್ಲಿ ಹಣ ಜೇಬಿಗಿಳಿಸಿ ನಿಷ್ಠಾವಂತನಾಗಿ ತನ್ನ ಅಭ್ಯರ್ಥಿಗೆ ಮತ ನೀಡಿದ್ದಾನೋ ಎಂಬದು ಇನ್ನೊಂದು ಲೆಕ್ಕಾಚಾರವಾಗಿದೆ..!