ಪೊನ್ನಂಪೇಟೆ, ಮೇ. ೧೧: ಮನೆಯ ಮುಂಭಾಗ ಆಟವಾಡುತ್ತಿದ್ದ ಸಂದರ್ಭ ತೆರೆದ ಬಾವಿಗೆ ಬಿದ್ದು ಮೂರೂವರೆ ವರ್ಷದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಕೋಟೂರು ಗ್ರಾಮದ ಪೆಮ್ಮಂಡ ರೋಶನ್ ಮತ್ತು ಇಶು ದಂಪತಿಯ ಪುತ್ರಿ ಸಿಯಾನ್ ಮೃತ ದುರ್ದೈವಿ.

ಘಟನೆಯ ವಿವರ

ತಾ. ೧೦ ರಂದು ವಿಧಾನ ಸಭಾ ಚುನಾವಣೆಯ ದಿನ ಮೃತ ಮಗುವಿನ ತಂದೆ ಹಾಗೂ ಅಜ್ಜ ಮತದಾನ ಮಾಡಲು ಮತದಾನ ಕೇಂದ್ರಕ್ಕೆ ತೆರಳಿದ್ದರು. ಮಗುವಿನ ತಾಯಿ ಮತ್ತು ಅಜ್ಜಿ ಮನೆಯ ಒಳಗೆ ಕೆಲಸದಲ್ಲಿ ಮಗ್ನರಾಗಿದ್ದರು. ಈ ಸಂದರ್ಭ ಮಗು ಸಿಯಾನ್ ಬಲೂನ್‌ನಲ್ಲಿ ಮನೆಯ ಮುಂಭಾಗ ತನ್ನ ಪಾಡಿಗೆ ಆಟವಾಡುತಿದ್ದಳು. ಈ ವೇಳೆ ಮಗು ಆಟವಾಡುತಿದ್ದ ಬಲೂನ್ ಮನೆಯ ಮುಂಭಾಗವೇ ಇರುವ ತೆರೆದ ಬಾವಿಗೆ ಹೊದಿಸಿದ್ದ ಶೇಡ್ ನೆಟ್ ಮೇಲೆ ಬಿದ್ದಿದೆ. ಬಲೂನ್ ‘ಶೇಡ್‌ನೆಟ್’ ಮೇಲೆ ಇರುವುದನ್ನು ಗಮನಿಸಿದ ಮಗು, ಅದನ್ನು ತೆಗೆಯುವ ಸಲುವಾಗಿ ಮನೆಯಿಂದ ತನ್ನದೇ ಸಣ್ಣ ಕುರ್ಚಿ ತಂದು ಅದರ ಮೇಲೆ ನಿಂತು ಬಲೂನ್ ತೆಗೆಯುವ ಪ್ರಯತ್ನ ಮಾಡಿದೆ.

ಬಲೂನ್ ಸಿಗದಿದ್ದಾಗ ಬಾವಿಗೆ ಹೊದಿಸಿದ್ದ ಶೇಡ್ ನೆಟ್ ಮೇಲೆ ಕಾಲಿಟ್ಟು ತೆಗೆಯಲು ಯತ್ನಿಸಿದೆ. ಈ ಸಂದರ್ಭ ತಕ್ಷಣ ಶೇಡ್ ನೆಟ್ ಬಾವಿಯ ಒಳಕ್ಕೆ ಜಾರಿ ಹೋಗಿದೆ. ಮನೆಯ ಒಳಗಿದ್ದ ತಾಯಿ ಮತ್ತೆ ಅಜ್ಜಿ ಮಗು ಮನೆಯ ಹೊರಗೆ ಆಟವಾಡುತ್ತಿರಬಹುದು ಎಂದು ಭಾವಿಸಿ ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿಕೊಂಡಿದ್ದರು.

(ಮೊದಲ ಪುಟದಿಂದ) ಸ್ವಲ್ಪ ಸಮಯ ಕಳೆದ ನಂತರ ಮಗು ಕಾಣೆಯಾಗಿರುವ ಬಗ್ಗೆ ಪೋಷಕರ ಗಮನಕ್ಕೆ ಬಂದಿದ್ದು, ಮಗುವನ್ನು ಮನೆಯ ಹೊರಗೆ ಹುಡುಕಾಡಿದ್ದಾರೆ. ಮಗು ಎಲ್ಲೂ ಕಾಣದಿದ್ದ ಸಂದರ್ಭ ಬಾವಿಯ ಬಳಿ ಗಮನಿಸಿದ್ದಾರೆ. ಬಾವಿಯ ಒಳಗೆ ಬಲೂನ್ ಇರುವುದನ್ನು ಗಮನಿಸಿ, ಬಾವಿಯಲ್ಲಿ ಶೋಧಿಸಿದ ಸಂದರ್ಭ ಮಗುವಿನ ಮೃತದೇಹ ಪತ್ತೆಯಾಗಿದೆ. ತಮ್ಮ ಒಬ್ಬಳೇ ಒಬ್ಬಳು ಮುದ್ದು ಮಗುವಿನ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದ ಪೋಷಕರು, ಆಕೆಯ ಮುಂದಿನ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಟ್ಟಿಕೊಂಡಿದ್ದರು. ಅದಕ್ಕಾಗಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಪೊನ್ನಂಪೇಟೆ ದೇವಸ್ಥಾನವೊಂದರಲ್ಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾಗಿ ತಮ್ಮ ಬದುಕಿನ ಭರವಸೆಯ ಬೆಳಕಾಗಬೇಕಾಗಿದ್ದ ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಹೆತ್ತವರು ಶೋಕ ಸಾಗರದಲ್ಲಿ ಮುಳುಗಿಹೋಗಿದ್ದಾರೆ. ಅರಳುವ ಮುನ್ನವೇ ಬಾಡಿಹೋದ ಕರುಳಿನ ಕುಡಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮೃತ ಮಗು ಕಳೆದ ವರ್ಷ ಬಿಡುಗಡೆಗೊಂಡಿದ್ದ 'ಭೀರ್ಯ' ಎಂಬ ಹೆಸರಿನ ಕೊಡವ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿತ್ತು.

ಮನೆಯ ಮುಂಭಾಗವೇ ಇದ್ದ ತೆರೆದ ಬಾವಿಗೆ ಗ್ರಿಲ್ ಅಳವಡಿಸದೇ ಇದ್ದದ್ದೇ ಈ ರೀತಿಯ ದುರ್ಘಟನೆ ನಡೆಯಲು ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಸಮೀಪ ಇರುವ ಬಾವಿಗಳಿಗೆ ಗ್ರಿಲ್ ಅಳವಡಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.

ಮನೆಯ ಸುತ್ತ ಮುತ್ತ, ತೋಟ, ಹಾಗೂ ಸಾರ್ವಜನಿಕ ಬಾವಿಗಳಿಗೆ ಗ್ರಿಲ್ ಅಳವಡಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿ ಎಂಬುದು ‘ಶಕ್ತಿ’ ಕಳಕಳಿಯಾಗಿದೆ.

-ಚನ್ನನಾಯಕ