ಮಡಿಕೇರಿ, ಮೇ ೧೦: ಭಾರೀ ಕುತೂಹಲ ಸೃಷ್ಟಿಸಿರುವ ೧೬ನೆಯ ವಿಧಾನಸಭೆಗೆ ನಡೆದ ಚುನಾವಣೆ ಕೊಡಗು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಿದ್ದು, ಈ ಹಿಂದಿನ ಚುನಾವಣೆಗಳಿಗಿಂತ ತುಸು ಸ್ಪರ್ಧಾತ್ಮಕ ರೀತಿಯಲ್ಲಿ ಮತದಾನ ನಡೆದಿರುವುದು ವಿಶೇಷವಾಗಿದೆ. ಭಾರೀ ರಾಜಕೀಯ ಬೆಳವಣಿಗೆಗಳ ನಡುವೆ ಕೊಡಗಿನಾದ್ಯಂತ ಶಾಂತಿಯುತ ಮತ ಪ್ರಕ್ರಿಯೆ ನಡೆದಿದ್ದು, ಇದೀಗ ಎಲ್ಲರ ಚಿತ್ತ ಮೇ ೧೩ರ ಶನಿವಾರ ನಡೆಯಲಿರುವ ಮತ ಎಣಿಕೆಯತ್ತ ನೆಟ್ಟಿದೆ.

ಜಿಲ್ಲೆಯಲ್ಲಿ ಈ ಬಾರಿ ಶೇ. ೭೪.೭೪ ರಷ್ಟು ಮತದಾನವಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೫.೩೯ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಶೇ.೭೪.೦೭ ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ ೭೪.೭೪ ಮತದಾನವಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು ೨,೩೨,೧೪೮ ಮತದಾರರ ಪೈಕಿ ೧,೭೫,೦೦೯ ಮತದಾರರು ಮತ ಚಲಾಯಿಸಿದ್ದಾರೆ. ವೀರಾಜಪೇಟೆ ಕ್ಷೇತ್ರದಲ್ಲಿ ೨,೨೪,೧೬೫ ಮತದಾರರ ಪೈಕಿ ೧,೬೬,೦೩೭ ಮತದಾರರು ಮತದಾನ ಮಾಡಿದ್ದಾರೆ.

ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ಆರಂಭಗೊAಡಿತು. ಸ್ಪರ್ಧಾ ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷಗಳ ಮುಖಂಡರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರೆ, ಕಾರ್ಯಕರ್ತರು, ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಉತ್ಸುಕತೆಯಿಂದ ತಮ್ಮ ಹಕ್ಕು ಚಲಾಯಿಸಿದರು.

ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದ ತಂಡ ಗೊಂದಲ ರಹಿತವಾದ ಮತಪ್ರಕ್ರಿಯೆ ನಿಭಾಯಿಸುವಲ್ಲಿ ಶ್ರಮಿಸಿದರು. ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಸೂಕ್ತ ಬಂದೋ ಬಸ್ತ್ನ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷö್ಮ - ಅತಿ ಸೂಕ್ಷö್ಮ ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ವಿಶೇಷ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರಕ್ರಿಯೆಗಳ ವೀಡಿಯೋ ಚಿತ್ರೀಕರಣವನ್ನೂ ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ೧೫ ಮಂದಿ ಹಾಗೂ ವೀರಾಜಪೇಟೆಯಲ್ಲಿ ೯ ಮಂದಿ ಕಣದಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೫೪೨ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಪೈಕಿ ೧೯ ಕೇಂದ್ರಗಳನ್ನು ವಿಶೇಷ ಮತಗಟ್ಟೆಗಳೆಂದು ಪರಿಗಣಿಸಲಾಗಿತ್ತು. ಇದರಲ್ಲಿ ೧೦ ಸಖಿ ಮತಗಟ್ಟೆಗಳು, ೨ ವಿಶೇಷ ಚೇತನರ ಮತಗಟ್ಟೆಗಳು, ೨ ಯುವ ಮತದಾರರ ಪೋಲಿಂಗ್ ಬೂತ್, ೩ ಥೀಮ್ ಬೇಸ್ಟ್ ಬೂತ್, ೨ ಸಾಂಪ್ರದಾಯಿಕ ಮತಗಟ್ಟೆ (ಎಥ್ನಿಕ್ ಪೋಲಿಂಗ್ ಬೂತ್) ವ್ಯವಸ್ಥೆ ಮಾಡಲಾಗಿತ್ತು. ಈ ಮಾದರಿಯ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗಿದ್ದು, ಗಮನ ಸೆಳೆದವು.