ಸುಂಟಿಕೊಪ್ಪ, ಮೇ ೧೦: ವಿಧಾನ ಸಭಾ ಚುನಾವಣೆಯ ಮತದಾನವು ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಾಂತಿಯುತವಾಗಿ ನಡೆಯಿತು.
ಗುರುವಾರ ಬೆಳಿಗ್ಗೆ ೭ ಗಂಟೆಗೆ ಆರಂಭವಾದ ಮತದಾನದ ಪ್ರಕ್ರಿಯೆಗೆ ೬.೫೦ಕ್ಕೆ ಮತದಾರರು ಸರತಿ ಸಾಲಿನಲ್ಲಿ ಮತ ಚಲಾಯಿಸಲು ನಿಂತಿರುವುದು ಕಂಡು ಬಂತು. ಬೆಳಗ್ಗಿನಿಂದಲೇ ಮತದಾನ ಮಾಡಲು ಉತ್ಸಾಹದಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬAದಿತು. ಸುಂಟಿಕೊಪ್ಪ, ಗದ್ದೆಹಳ್ಳ, ನಾಕೂರು ಶಿರಂಗಾಲ, ಕೆದಕಲ್, ಮತ್ತಿಕಾಡು, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
ಅಂಗಡಿ ಮುಂಗಟ್ಟುಗಳು ಬಂದ್: ಸುಂಟಿಕೊಪ್ಪ ನಗರದ ಮುಖ್ಯ ರಸ್ತೆಯ ಎಲ್ಲಾ ಅಂಗಡಿ ಹೊಟೇಲ್‌ಗಳಿಗೆ ಇಲ್ಲಿನ ಗ್ರಾಮ ಪಂಚಾಯಿತಿ ಮುಚ್ಚುವಂತೆ ನೋಟೀಸ್ ನೀಡಿದರಿಂದ ಬಹುತೇಕ ವ್ಯಾಪಾರಸ್ಥರು ಅಂಗಡಿ ಹೊಟೇಲ್‌ಗಳನ್ನು ಮುಚ್ಚದರಿಂದ ವ್ಯಾಪಾರಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೂರದ ಗ್ರಾಮಗಳಿಂದ ಮತಹಾಕಲು ಬಂದವರು ಕಾಫಿ ಟೀ ಊಟ ಸಿಗದೆ ಪರದಾಡುವಂತಾಯಿತು. ಕೆಲವೆಡೆ ವಯೋವೃದ್ದರು ದಿವ್ಯಾಂಗರನ್ನು ಗಾಲಿಕುರ್ಚಿ ಯಲ್ಲಿ ಮತಗಟ್ಟೆಗೆ ಕರೆ ತಂದು ಮತದಾನ ಮಾಡಿಸುವಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮೊದಲ ಮತದಾನ: ಮಂಗಳೂರು, ಪುತ್ತೂರು, ಬೆಂಗಳೂರು, ತಿಪ್ಪಟೂರು, ಹಾಸನ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಬಗ್ಗೆ ಪತ್ರಿಕೆಯೊಂದಿಗೆ ಹರ್ಷವ್ಯಕ್ತಪಡಿಸಿದರು.
ಪ್ರಯಾಣಿಕರ ಪರದಾಟ: ಚುನಾವಣೆಯ ಸಲುವಾಗಿ ಸರಕಾರಿ ಬಸ್ಸುಗಳನ್ನು ಬಳಸಿರುವುದರಿಂದ ಸುಂಟಿಕೊಪ್ಪದಲ್ಲಿ ಬಸ್ಸಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.