*ಸಿದ್ದಾಪುರ, ಮೇ ೧೦: ಬಿಸಿಲಿನ ಬೇಗೆಗೆ ಜಿಲ್ಲೆಯ ವಿವಿಧೆಡೆ ಕಾವೇರಿ ಒಡಲು ಬರಿದಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ಹುಟ್ಟುವ ನಾಡಿನಲ್ಲೇ ನೀರಿಗೆ ಬರ ಬಂದಿದೆ.

ತಲಕಾವೇರಿಯಲ್ಲಿ ಹುಟ್ಟಿ ಕುಶಾಲನಗರದ ಮೂಲಕ ಮೈಸೂರು ಸೇರುವ ಕಾವೇರಿ ಈಗ ಬತ್ತಿಹೋಗಿದೆ. ಕುಶಾಲನಗರ ಸಮೀಪ ನಂಜರಾಯಪಟ್ಟಣದ ದಾಸವಾಳ ಎಂಬಲ್ಲಿ ನದಿ ನೀರು ಸಂಪೂರ್ಣವಾಗಿ ಬರಿದಾಗಿದ್ದು, ಬಂಡೆಕಲ್ಲುಗಳು ಗೋಚರಿಸಿವೆ. ಇದು ಗಣಿಗಾರಿಕೆಯ ಪ್ರದೇಶ ಎಂಬAತೆ ಭಾಸವಾಗುತ್ತಿದೆ.

ನದಿಯೊಳಗಿದ್ದ ಹಲವು ವರ್ಷಗಳ ಇತಿಹಾಸ ಹೊಂದಿರುವ ಬಸವ ಮೂರ್ತಿಯೊಂದು ಸಂಪೂರ್ಣವಾಗಿ ಗೋಚರಿಸುತ್ತಿದ್ದು, ಈ ಮಾರ್ಗದಲ್ಲಿ ಸಾಗುವ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ. ಇಷ್ಟು ವರ್ಷಗಳವರೆಗೆ ನದಿ ನೀರಿನ ಹರಿವು ಕಡಿಮೆಯಾಗಿ ಬಸವ ಮೂರ್ತಿಯ ತಲೆ ಗೋಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನದಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ ಮತ್ತು ಮೂರ್ತಿ ಪ್ರತ್ಯಕ್ಷವಾಗಿದೆ.

ಈ ಭಾಗದ ಕೃಷಿಕ ವರ್ಗ ಕೃಷಿ ಕಾರ್ಯಕ್ಕೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಕುಡಿಯಲು ಕೂಡ ನೀರಿನ ಕೊರತೆ ಎದುರಾಗಿದೆ. ಹೆಚ್ಚಿನ ಪ್ರಮಾಣದ ಮಳೆಯಾದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಅಂಚೆಮನೆ ಸುಧಿ