ಮಡಿಕೇರಿ, ಮೇ. ೯: ಕಣ್ಣಿಗೆ ಹಿತ ನೀಡುವ ಬುಡಕಟ್ಟು ವರ್ಗದ ವರ್ಣಿ ಚಿತ್ರಕಲೆ, ವೈವಿಧ್ಯಮಯ ಬಣ್ಣದಲ್ಲಿ ರೂಪುಗೊಂಡ ಕೊಡಗಿನ ವೈಭವ, ಗಿರಿಜನರ ಸಂಸ್ಕೃತಿಯ ಅನಾವರಣ, ಸೆಲ್ಫಿ ಬೂತ್, ಕುಡಿಯಲು ಕಾಫಿ, ಆಕರ್ಷಿಸುತ್ತಿರುವ ಕೊಡಗಿನ ವಿಶೇಷ ಮತಗಟ್ಟೆಗಳು..

ಹೌದು.. ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಏರಿದೆ. ಇಂದು ಮತದಾನದ ಮೂಲಕ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಶಾಂತಿಯುತ ಹಾಗೂ ವ್ಯವಸ್ಥಿತ ಚುನಾವಣೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಕಾರ್ಯಕ್ರಮ ರೂಪಿಸಿದೆ. ಈ ಮೂಲಕ ಮತದಾನ ಹೆಚ್ಚಳಕ್ಕೆ ಶ್ರಮಿಸುತ್ತಿದೆ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಅನೇಕ ಕಾರ್ಯಕ್ರಮವನ್ನು ಅನುಷ್ಠಾನಗೊಂಡಿದೆ. ಅದರ ಭಾಗವಾಗಿ ವಿಶೇಷ ಮತಗಟ್ಟೆಗಳು ಒಂದಾಗಿದೆ.

ಜಿಲ್ಲೆಯ ವಿವಿಧೆಡೆ ೫ ಮಾದರಿಯ ೧೯ ಕೇಂದ್ರಗಳು ಮತದಾರರನ್ನು ಸೆಳೆಯುತ್ತಿವೆ. ಮಾದರಿಯ ಮತಗಟ್ಟೆಗಳು ಸಿಂಗಾರಗೊAಡಿವೆ. ಇದಕ್ಕಾಗಿ ಅಧಿಕಾರಿಗಳು ಶ್ರಮವಹಿಸುತ್ತಿದ್ದು, ವಿಶೇಷ ವಿನ್ಯಾಸಗಳ ಮೂಲಕ ಮತಗಟ್ಟೆಯ ಅಂದವನ್ನು ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ.

ವಿಶೇಷ ಮತಗಟ್ಟೆಗಳು

ಜಿಲ್ಲೆಯಲ್ಲಿ ೫೪೨ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ ೧೯ ಕೇಂದ್ರಗಳನ್ನು ವಿಶೇಷ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಇದರಲ್ಲಿ ೧೦ ಸಖಿಮತಗಟ್ಟೆಗಳು, ೨ ವಿಶೇಷಚೇತನರ ಮತಗಟ್ಟೆಗಳು, ೨ ಯುವ ಮತದಾರರ ಪೋಲಿಂಗ್ ಬೂತ್, ೩ ಥೀಮ್ ಬೇಸ್ಡ್ ಬೂತ್, ೨ ಸಾಂಪ್ರದಾಯಿಕ ಮತಗಟ್ಟೆ (ಎಥ್ನಿಕ್ ಪೋಲಿಂಗ್ ಬೂತ್) ಮಾಡಲಾಗಿದೆ.

ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಮಹಿಳಾ ಮತದಾರರಿಗೆ ಆದ್ಯತೆ ನೀಡಲಾಗುತ್ತದೆ. ಅವರಿಗಾಗಿ ಸೆಲ್ಫಿ ಬೂತ್, ಶಾಮಿಯಾನ, ಕುಡಿಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಹಿಳಾ ಸ್ನೇಹಿಯಾಗಿ ಈ ಬೂತ್ ಕಾರ್ಯನಿರ್ವಹಿಸಲಿದೆ.

ಮಡಿಕೇರಿ ಕ್ಷೇತ್ರದಲ್ಲಿ ಮಹದೇವಪೇಟೆಯ ಸಿಎಂಸಿ ಪ್ರೌಢಶಾಲೆ, ಶಿರಂಗಾಲದ (ಮೊದಲ ಪುಟದಿಂದ)

ಕಾಫಿ ವೈಭವ – ಗಿರಿಜನರ ಸಂಸ್ಕೃತಿಯ ಅನಾವರಣ

ಕೊಡಗಿನ ಕಾಫಿಯ ವೈಭವವನ್ನು ಚಿತ್ರಕಲೆಯ ಮೂಲಕ ಅನಾವರಣಗೊಳಿಸಿ ‘ಥೀಮ್ ಬೇಸ್ಡ್’ ಬೂತ್‌ಗಳನ್ನು ಮಾಡಲಾಗಿದೆ.

ಮಡಿಕೇರಿಯ ಹಿಲ್ ರಸ್ತೆಯ ಸಿಎಂಸಿ ಪ್ರಾಥಮಿಕ ಶಾಲೆ, ರಂಗಸಮುದ್ರದ ಸರಕಾರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲೆಗಳ ಮೂಲಕ ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಮಡಿಕೇರಿಯ ಬೂತ್‌ನಲ್ಲಿ ರಿಯಾಯಿತಿ ದರದಲ್ಲಿ ಮತದಾರರಿಗೆ ಕಾಫಿ ವ್ಯವಸ್ಥೆ, ವೆಯ್ಟಿಂಗ್ ರೂಂ ಸೌಲಭ್ಯದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಮತದಾನ ಮಾಡಲು ಟೋಕನ್ ನೀಡಲು ಕ್ರಮವಹಿಸಲಾಗಿದೆ.

ಇದರೊಂದಿಗೆ ಸಾಂಪ್ರದಾಯಿಕ ಮತಗಟ್ಟೆ (ಎಥ್ನಿಕ್ ಪೊಲೀಂಗ್ ಬೂತ್) ಗಳಲ್ಲಿ ಗಿರಿಜನರ ಸಂಸ್ಕೃತಿಯನ್ನು ವರ್ಣಿ ಕಲೆಯ ಮೂಲಕ ಅನಾವರಣಗೊಳಿಸಲಾಗಿದೆ.

ತಿತಿಮತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಗರಹೊಳೆಯ ಆಶ್ರಮ ಶಾಲೆಯನ್ನು ಚಿತ್ರಕಲೆಯ ಮೂಲಕ ಸಿಂಗಾರಗೊಳಿಸಲಾಗಿದೆ. ಜೊತೆಗೆ ಗಿರಿಜನರ ಸಾಂಪ್ರದಾಯಿಕ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಎಲ್ಲಾ ವಿಶೇಷ ಮತಗಟ್ಟೆಗಳಲ್ಲಿ ಸಿಬ್ಬಂದಿಗಳಿಗೆ ‘ಡ್ರೆಸ್ ಕೋಡ್’ ಇರಲಿದೆ.

-ವರದಿ : ಹೆಚ್.ಜೆ. ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್