ಗೋಣಿಕೊಪ್ಪಲು, ಮೇ ೧೦: ಕರ್ನಾಟಕ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತದಾರರು ಮುಂಜಾನೆಯ ೭ ಗಂಟೆಯಿAದಲೇ ಮತದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

೧೮ ವಯಸ್ಸು ತುಂಬಿದ ಹೊಸ ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು.

ಬಿಸಿಲಿನ ಝಳವನ್ನು ಲೆಕ್ಕಿಸದ ಮತದಾರರು ತಮ್ಮ ತಮ್ಮ ಮತ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು.

ದಕ್ಷಿಣ ಕೊಡಗಿನಲ್ಲಿ ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು.

ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿ ಬೆಳ್ಳೂರು ಸರಕಾರಿ ಪ್ರಾಥಮಿಕ ಶಾಲಾ ಆವರಣದ ಮತ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಮುಂಜಾನೆ ೯.೧೦ಕ್ಕೆ ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದರು.

ಇದಕ್ಕೂ ಮುನ್ನ ಅಜ್ಜಿಕುಟ್ಟೀರ ಐನ್‌ಮನೆಗೆ ತೆರಳಿದ ಎ.ಎಸ್. ಪೊನ್ನಣ್ಣ ಹಾಗೂ ಕುಟುಂಬ ಹಿರಿಯರಿಗೆ ಗೌರವ ಸಲ್ಲಿಸಿದರು. ಬಳಿಕ ಬೆಳ್ಳೂರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.

ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಳವಡಿಸಿದ್ದ ಮತ ಯಂತ್ರವು ಮುಂಜಾನೆಯ ವೇಳೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿತ್ತು.

ಮಧ್ಯಾಹ್ನ ವೇಳೆ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂತು.

ಬೂತ್‌ನಲ್ಲಿದ್ದ ಚುನಾವಣಾ ಅಧಿಕಾರಿಗಳಿಗೆ ಕೆಲ ಕಾಲ ಆತಂಕ ಎದುರಾಯಿತು.

ದೋಷ ಸರಿಪಡಿಸುವ ನಿಟ್ಟಿನಲ್ಲಿ ತಾಂತ್ರಿಕ ತಂಡ ಆಗಮಿಸಿ ಗಂಟೆಗೂ ಅಧಿಕ ಸಮಯ ತೆಗೆದುಕೊಂಡು ಅಂತಿಮವಾಗಿ ದೋಷ ಪರಿಹರಿಸುವಲ್ಲಿ ಯಶಸ್ವಿಯಾದರು.

ಇದರಿಂದಾಗಿ ಮತದಾನ ಕೇಂದ್ರದಲ್ಲಿ ಹೆಚ್ಚಾಗಿ ಜನರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು.

ಗಡಿಭಾಗದಲ್ಲಿ ಕಟ್ಟೆಚ್ಚರ

ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗವಾದ ಕೊಡಗು-ಕೇರಳ ಸಂಪರ್ಕದ ಕುಟ್ಟ ಬಳಿಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಪ್ರತಿ ವಾಹನಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳ ತಂಡದಿAದ ನಂತರ ವಾಹನಗಳನ್ನು ಬಿಡಲಾಗುತ್ತಿತ್ತು. ಗಡಿಭಾಗ ಸೇರಿದಂತೆ ಮತಗಟ್ಟೆ ಬಳಿಯಲ್ಲಿ ಹೆಚ್ಚಿನ ಮಿಲಿಟರಿ ಪಡೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.

ಮತ ಕೇಂದ್ರಕ್ಕೆ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿತ್ತು. ಪೊಲೀಸರು ಹಾಗೂ ಅಧಿಕಾರಿಗಳು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು.

ಮತದಾನ ಕೇಂದ್ರದ ಹೊರಭಾಗದಲ್ಲಿ ಅಭ್ಯರ್ಥಿ ಪರವಾಗಿದ್ದ ವಿವಿಧ ಪಕ್ಷದ ನಾಯಕರನ್ನು ಅಂತಿಮವಾಗಿ ಮನವೊಲಿಸುವ ಕೆಲಸ ಮಾಡುವ ಮೂಲಕ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಕೊನೆ ಘಳಿಗೆಯ ಪ್ರಯತ್ನ ಮಾಡಿದರು.

ಪಟ್ಟಣ ಪ್ರದೇಶದ ಮತ ಕೇಂದ್ರದ ಹೊರಭಾಗದಲ್ಲಿ ಹೆಚ್ಚಾಗಿ ಪಕ್ಷದ ಪರವಾಗಿ ಪ್ರಚಾರ ನಡೆಸುವವರ ಸಂಖ್ಯೆ ಅಧಿಕವಾಗಿತ್ತು.