ಸೋಮವಾರಪೇಟೆ, ಮೇ. ೯: ‘ಅಮೇರಿಕಾದಿಂದ ಬಂದರೂ ನಾನು ಕ್ಷೇತ್ರದ ಜನರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಮಾಡಿದ್ದೇನೆ. ಪಕ್ಕದ ಅರಕಲಗೂಡಿನಲ್ಲೇ ನೀವಿದ್ದರೂ ಮಡಿಕೇರಿ ಜನರಿಗೆ ಯಾವ ಸೇವೆ ಮಾಡಿದ್ದೀರಿ?’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರನ್ನು ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರ ಪುತ್ರ ಡಾ. ಕಾರ್ಯಪ್ಪ ಪ್ರಶ್ನಿಸಿದರು.

ಜೇಸೀ ವೇದಿಕೆಯಲ್ಲಿ ತಾ. ೮ ರಂದು ಆಯೋಜಿಸಿದ್ದ ಸಭೆಯ ಮುಕ್ತಾಯದಲ್ಲಿ ಮಾತನಾಡಿದ ಡಾ. ಕಾರ್ಯಪ್ಪ ಅವರು, ‘ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರ ಪುತ್ರ ಅಮೇರಿಕಾದವರ ಸೇವೆ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರು ಮಾಡಿದ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಅಪ್ಪಚ್ಚು ರಂಜನ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದ ಡಾ. ಕಾರ್ಯಪ್ಪ, ನಾನು ವೈದ್ಯಕೀಯ ವಿದ್ಯಾಭ್ಯಾಸವನ್ನು ಜಿಲ್ಲೆಯ ಹೊರಗೆ ಮಾಡಿದ್ದೇನೆ. ಈಗ ಮಡಿಕೇರಿ ಕ್ಷೇತ್ರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ಇದರೊಂದಿಗೆ ವಿಶ್ವವಿದ್ಯಾನಿಲಯ, ಇಂಜಿನಿಯರಿAಗ್, ವಸತಿ ಶಾಲೆಗಳು, ಸೈನಿಕ ಶಾಲೆ ಎಲ್ಲವೂ ಇಲ್ಲೇ ಇದೆ. ಶಾಸಕರ ಮೇಲೆ ಹೆಮ್ಮೆಯಿದೆ ಎಂದರು.