ಸೋಮವಾರಪೇಟೆ, ಮೇ. ೯: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್ಗೌಡ ಅಭಿಪ್ರಾಯಿಸಿದರು.
ಇಲ್ಲಿನ ಜೇಸೀ ವೇದಿಕೆಯಲ್ಲಿ ತಾ. ೮ ರಂದು ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಕಳೆದ ೧೪ ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಪರ ಹೆಚ್ಚಿನ ಒಲವು ವ್ಯಕ್ತವಾಗಿದೆ. ಒಕ್ಕಲಿಗರ ಸಂಘಕ್ಕೆ ಲಕ್ಷಾಂತರ ರೂಪಾಯಿ ಸಹಕಾರ ನೀಡಿದ್ದಾರೆ. ಇತರ ಎಲ್ಲಾ ವರ್ಗದ ಸಮುದಾಯ ಭವನ, ದೇವಾಲಯ, ಮಸೀದಿ, ಚರ್ಚ್ಗಳಿಗೂ ಸಹಕಾರ ನೀಡಿದ್ದಾರೆ. ಧರ್ಮಾತೀತರಾಗಿ ಸಮಾಜ ಸೇವೆಯಲ್ಲಿರುವ ಮುತ್ತಪ್ಪ ಅವರನ್ನು ಎಲ್ಲರೂ ಬೆಂಬಲಿಸಲಿದ್ದಾರೆ ಎಂದು ವಿಠಲ್ಗೌಡ ಅಭಿಪ್ರಾಯಿಸಿದರು.
ಪಕ್ಷದ ಮುಖಂಡರಾದ ನಾಪಂಡ ಮುದ್ದಪ್ಪ ಮಾತನಾಡಿ, ಕಳೆದ ೧೪ ವರ್ಷಗಳಿಂದ ಮುತ್ತಪ್ಪ ಅವರು ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಈವರೆಗೆ ೨೫ ಕೋಟಿಗೂ ಅಧಿಕ ಹಣವನ್ನು ಸಮಾಜ ಸೇವೆಗೆ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಮುತ್ತಪ್ಪ ಅವರು ಸ್ಪರ್ಧಿಸುತ್ತಿದ್ದು, ಹೆಚ್.ಡಿ. ದೇವೇಗೌಡರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.
ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಕನಿಷ್ಟ ರಸ್ತೆಗಳನ್ನು ಮಾಡಿಸಲೂ ಸಹ ಕಾಂಗ್ರೆಸ್ ಅಭ್ಯರ್ಥಿಗೆ ಸಾಧ್ಯವಾಗಿಲ್ಲ. ಜಿ.ಪಂ. ಸದಸ್ಯರಾಗಿಯೂ ಜನ ಸೇವೆ ಮಾಡಿಲ್ಲ. ಇನ್ನು ಮಡಿಕೇರಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಟಿ. ಪರಮೇಶ್, ತಾಲೂಕು ಅಧ್ಯಕ್ಷ ನಾಗರಾಜು, ಪ್ರಮುಖರಾದ ಹೊಸಬೀಡು ಹೂವಯ್ಯ, ಎಂ.ಪಿ. ಹೊನ್ನಪ್ಪ, ಜಯಾನಂದ, ಆದರ್ಶ್ ತಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.