ಮಡಿಕೇರಿ, ಮೇ ೮: ಕೋಳಿ ಗೂಡಿಗೆ ನುಗ್ಗಿದ ಬೃಹತ್ ಗಾತ್ರದ ನಾಗರಹಾವೊಂದು ಕೋಳಿಯನ್ನು ನುಂಗಿದ ಘಟನೆ ನಡೆದಿದೆ. ನಾಗರಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ಬಳಿಯ ಸಂಪಿಗೆಕೊಲ್ಲಿ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ಕುಮಾರ್ ಎಂಬವರು ಮನೆಯ ಸಮೀಪ ಗೂಡಿನಲ್ಲಿ ೫ ಕೋಳಿಗಳನ್ನ ಸಾಕಿದ್ದರು. ಬೆಳಿಗ್ಗೆ ಕೋಳಿಗಳನ್ನು ಗೂಡಿನಿಂದ ಹೊರಗೆ ಬಿಡಲು ಹೋದ ಸಂದರ್ಭ ಒಂದು ಕೋಳಿ ಸತ್ತು ಬಿದ್ದು ಮತ್ತೊಂದು ಕೋಳಿ ಕಾಣೆಯಾಗಿತ್ತು. ಗೂಡಿನಲ್ಲಿ ಪರಿಶೀಲಿಸಿದ್ದ ಸಂದರ್ಭ ಕೋಳಿಯನ್ನು ನುಂಗಿದ ನಾಗರಹಾವು ಗೋಚರಿಸಿದೆ.
ಭಯಭೀತರಾದ ಕುಮಾರ್ ತಕ್ಷಣ ಗುಹ್ಯ ಗ್ರಾಮದ ಉರಗರಕ್ಷಕ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸುರೇಶ್ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಎರಡು ದಿನಗಳ ಹಿಂದೆ ಸಮೀಪದ ಮನೆಯೊಂದರಲ್ಲಿ ಮೂರು ಕೋಳಿಗಳನ್ನು ಬಲಿ ತೆಗೆದುಕೊಂಡ ನಾಗರಹಾವು ಕಣ್ಮರೆಯಾಗಿತ್ತು. ಇದೀಗ ನಾಗರಹಾವು ಸೆರೆಹಿಡಿದ ನಂತರ ಸ್ಥಳೀಯರು ನಿಟ್ಟಿಸಿರುಬಿಟ್ಟಿದ್ದಾರೆ.