ಮಡಿಕೇರಿ, ಮೇ ೮: ರಾಜ್ಯ ವಿಧಾನಸಭೆಯ ಚುನಾವಣೆಯ ದಿನ ಇದೀಗ ಹೊಸ್ತಿಲಲ್ಲಿದೆ. ತಾ. ೧೦ ರಂದು (ನಾಳೆ) ಮತಸಮರ ನಡೆಯಲಿದ್ದು, ಇಡೀ ರಾಜ್ಯದಲ್ಲಿ ಒಂದೇ ದಿನ ಮತದಾನ ನಡೆಯುತ್ತಿದೆ. ಪ್ರಸಕ್ತ ವರ್ಷದ ಚುನಾವಣೆಯ ಕುತೂಹಲ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲ... ಇಡೀ ದೇಶದಲ್ಲಿದೆ.
ಆಡಳಿತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನ, ಮತ್ತೆ ಅಧಿಕಾರಕ್ಕೆ ಬರುವ ತವಕದಲ್ಲಿ ಕಾಂಗ್ರೆಸ್ ಪಕ್ಷ ಇದ್ದರೆ, ಈ ಬಾರಿಯ ಗದ್ದುಗೆ ತಮ್ಮದಾಗಲಿದೆ ಎಂಬAತಿರುವ ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ರಾಜ್ಯ ಈ ಬಗ್ಗೆ ಭಾರೀ ಕುತೂಹಲದಲ್ಲಿದೆ. ಕೊಡಗು ಜಿಲ್ಲೆಯಲ್ಲೂ ಪ್ರಸ್ತುತ ಕಂಡು ಬಂದಿರುವ ರಾಜಕೀಯ ಸನ್ನಿವೇಶದಿಂದಾಗಿ ಜಿಲ್ಲೆಯಲ್ಲೂ ಈ ಬಾರಿಯ ಚುನಾವಣಾ ಕಣ ತೀರಾ ಕುತೂಹಲಕಾರಿಯಾಗಿದೆ.
ಎರಡು ಕ್ಷೇತ್ರಗಳಲ್ಲೂ ಪ್ರಬಲ ಸ್ಪರ್ಧೆಯಿರುವುದು ಬಹುತೇಕ ಖಚಿತ. ಈ ಕಾರಣದಿಂದಾಗಿ ಈ ಬಾರಿ ಯಾವ ಪಕ್ಷದತ್ತ ಮತದಾರರು ಒಲವು ತೋರಲಿದ್ದಾರೆ ಎಂಬ ಕೌತುಕ ಹೆಚ್ಚಿದೆ. ಚುನಾವಣೆಯ ಬಿರುಸು ಒಂದೆಡೆಯಾದರೆ ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು, ಅಲ್ಲಲ್ಲಿ ದಿಢೀರ್ ಮಳೆ ಸುರಿಯುತ್ತಿದೆ. ಮತದಾನದ ದಿನದಂದು ಒಂದು ವೇಳೆ ಮಳೆಯಾದಲ್ಲಿ ಇದರ ಪರಿಣಾಮ ಏನಾಗಬಹುದು ಎಂಬ ಆತಂಕವೂ ಇದೀಗ ರಾಜಕೀಯ ಪಕ್ಷಗಳಲ್ಲಿ ಎದುರಾಗಿದೆ. ಜಿದ್ದಾಜಿದ್ದಿನ ಪೈಪೋಟಿಯಿರುವುದರಿಂದ ಮಳೆಯಿಂದ ಮತದಾನಕ್ಕೆ ಅಡಚಣೆಯಾದಲ್ಲಿ ಇದು ಯಾವ ಪಕ್ಷ - ಅಭ್ಯರ್ಥಿಗಳಿಗೆ ಪ್ರತಿಕೂಲವಾಗಲಿದೆ ಎಂಬ ದುಗುಡ ಈ ದಿನ ವಾತಾವರಣದಿಂದ ಉಂಟಾಗಿದೆ.