ಮಡಿಕೇರಿ, ಮೇ ೭: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮನು ಮುತ್ತಪ್ಪ ಆರೋಪಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರ ಪರವಾಗಿ ಯೋಜನೆ ಗಳನ್ನು ಘೋಷಿಸಿದ್ದು, ಇಲ್ಲಿನ ಕಾಂಗ್ರೆಸ್ಗೆ ಇದನ್ನು ಸಹಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಣಾಳಿಕೆಗೆ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ದೂರು ನೀಡಲಾಗುವುದು ಎಂದರು.
ಕೆ.ಜಿ. ಬೋಪಯ್ಯ ಅವರ ಕುರಿತು ಕೀಳುಮಟ್ಟದ ಪದಗಳನ್ನು ಬಳಸಿ ಅವಮಾನ ಮಾಡಲಾಗುತ್ತಿದೆ ಎಂದು ದೂರಿದರು. ಕಾಂಗ್ರೆಸ್ನವರು ಕೊಡಗಿನಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಆಪಾದಿಸಿದ ಮನು ಮುತ್ತಪ್ಪ ಇದರಲ್ಲಿ ಪರಿಸರವಾದಿಗಳು ಎನಿಸಿಕೊಂಡಿರುವ ಕೆಲವರ ಪಾತ್ರವೂ ಇದೆ ಎಂದು ಆರೋಪಿಸಿದರು. ಚುನಾವಣೆಗಾಗಿ ಕಾಂಗ್ರೆಸ್ ಜಾತಿ ಅಸ್ತçವನ್ನು ಬಳಸುತ್ತಿದ್ದು, ಇದಕ್ಕೆ ಕೊಡಗಿನ ಜನತೆ ಬಲಿಯಾಗುವುದಿಲ್ಲ ಎಂದು ಮನು ಮುತ್ತಪ್ಪ ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಅವರನ್ನು ನಾವು ವೈಯಕ್ತಿಕ ತೇಜೋವಧೆ ಮಾಡುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಹಿನ್ನೆಲೆ ಬಗ್ಗೆ ಚುನಾವಣೆ ವೇಳೆ ಬಹಿರಂಗ ಪಡಿಸುವುದು ನಮ್ಮ ಕರ್ತವ್ಯ. ಅದರಂತೆ ಪೊನ್ನಣ್ಣ ಅವರ ಹಿನ್ನೆಲೆಯ ಬಗ್ಗೆ ಹೇಳುತ್ತಿದ್ದೇವೆ ಹೊರತು ಅದು ತೇಜೋವಧೆ ಅಲ್ಲ ಎಂದು ಅವರು ಸಮರ್ಥಿಸಿದರು.
ಕೊಡಗಿನಲ್ಲಿ ಇಬ್ಬರು ಬಿಜೆಪಿ ಶಾಸಕರು ಸಾಕಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಬಗ್ಗೆ ನಾವು ಶ್ವೇತಪತ್ರವನ್ನು ಕೂಡ ಬಿಡುಗಡೆ ಮಾಡಿದ್ದೇವೆ. ಚುನಾವಣೆಗಾಗಿ ಕೊಡಗಿಗೆ ಬಂದಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇಲ್ಲಿನ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದ ಅವರು, ಕೊಡಗಿನಲ್ಲಿ ಜ್ವಲಂತ ಸಮಸ್ಯೆಗಳು ಇದ್ದಾಗ ಇವರುಗಳು ಎಲ್ಲಿದ್ದರು? ಎಂದು ಪ್ರಶ್ನಿಸಿದರು.
ಅಪ್ಪಚೆಟ್ಟೋಳಂಡ ಹಾಕಿಗೆ ತಾನು ಪೊನ್ನಣ್ಣ ಅವರಿಂದ ೩ ಲಕ್ಷ ಹಣ ಪಡೆದಿರುವುದಾಗಿ ಕಾಂಗ್ರೆಸ್ನ ಬಿ.ಎಸ್. ತಮ್ಮಯ್ಯ ಅವರು ಆರೋಪ ಮಾಡಿದ್ದಾರೆ. ಇದು ನಿಜವಾಗಿದ್ದರೆ ಅವರು ತಲಕಾವೇರಿಗೆ ಬಂದು ಪ್ರಮಾಣ ಮಾಡಲಿ ಎಂದು ಮನು ಮುತ್ತಪ್ಪ ಸವಾಲೆಸೆದರಲ್ಲದೆ, ಈ ಬಾರಿ ಅತ್ಯಧಿಕ ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಡ್ಡಂಡ ಕಾರ್ಯಪ್ಪ ಅವರು ಯಾರನ್ನು ತೇಜೋವಧೆ ಮಾಡಿಲ್ಲ ಸತ್ಯ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಭಾಷಣದ ಸಂದರ್ಭ ಆವೇಶದಿಂದ ಮಹಿಳೆಯರಿಗೆ ಅವಮಾನವಾಗುವಂತೆ ಮಾತನಾಡಿದ್ದರೆ ಅದು ತಪ್ಪು ಎಂದು ಮನು ಮುತ್ತಪ್ಪ ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಶರೀನ್ ಸುಬ್ಬಯ್ಯ ಮಾತನಾಡಿ, ಪಿಎಫ್ಐ ಬೆಂಬಲಿಗರ ಕುರಿತು ಕಾರ್ಯಪ್ಪ ಅವರು ಆ ರೀತಿ ಮಾತನಾಡಿದ್ದಾರೆ ಹೊರತು ಕೊಡಗಿನವರ ಬಗ್ಗೆ ಅಲ್ಲ ಎಂದರು. ಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಮಹೇಶ್ ಜೈನಿ, ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಉಪಸ್ಥಿತರಿದ್ದರು.