ಮಡಿಕೇರಿ, ಮೇ ೬: ಚುನಾವಣಾ ಪ್ರಚಾರದ ವೇಳೆ ಕೊಡವ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ಪರ ಪ್ರಚಾರ ಭಾಷಣ ಮಾಡುವ ವೇಳೆ ಅಡ್ಡಂಡ ಕಾರ್ಯಪ್ಪ ಕೊಡವ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇಂತಹ ಮಾತುಗಳನ್ನು ಖಂಡಿಸಬೇಕಿದ್ದ ಅಲ್ಲೇ ಇದ್ದ ಕೆಲ ಕೊಡವರು ಕಾರ್ಯಪ್ಪ ಮಾತಿಗೆ ಚಪ್ಪಾಳೆ ತಟ್ಟಿದ್ದಾರೆ. ಇದು ಕೆಟ್ಟ ಮನಸ್ಥಿತಿ ಎಂದು ವೀಣಾ ಅಚ್ಚಯ್ಯ ವಿಷಾದಿಸಿದರು.

ಕೊಡವನಾಗಿ ಹುಟ್ಟಿ, ಕೊಡವ ಜನಾಂಗಕ್ಕೆ ಅವಮಾನ ಮಾಡಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದ ವೀಣಾ, ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊAಡು ಬಿಜೆಪಿ ಚುನಾವಣೆ ಎದುರಿಸಲಿ ಅದನ್ನು ಬಿಟ್ಟು ಎದುರಾಳಿ ಅಭ್ಯರ್ಥಿಯನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಅಡ್ಡಂಡ ಕಾರ್ಯಪ್ಪ ಅವರ ಮೇಲೆ ಕೊಡವರಿಗೆ ಜಿಗುಪ್ಸೆ ಮೂಡಿದ್ದು, ಇದು ಬಿಜೆಪಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ ಅವರು, ಅಡ್ಡಂಡ ಕಾರ್ಯಪ್ಪ ಬಹಿರಂಗವಾಗಿ ಕೊಡವ ಹೆಣ್ಣುಮಕ್ಕಳ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಮಾತೆ ಕಾವೇರಿ ಬಗ್ಗೆ ಬಿಜೆಪಿ ಪ್ರಮುಖರ ಮಗನೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದ ಪ್ರಕರಣವನ್ನು ಬಿಜೆಪಿಯವರು ಮುಚ್ಚಿ ಹಾಕಿದರು ಎಂದು ದೂರಿದ (ಮೊದಲ ಪುಟದಿಂದ) ಅವರು, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವುದೇ ಬಿಜೆಪಿಯ ಕೆಲಸವಾಗಿದೆ ಎಂದು ಆಪಾದಿಸಿದರು.

ಸಂಸದ ಪ್ರತಾಪ್ ಸಿಂಹ ಅವರು, ಇಬ್ಬರು ಶಾಸಕರು ಕೊಡಗಿನಲ್ಲಿ ಎಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗಗಳಿಗೆ ತೆರಳಿದರೆ ಅಲ್ಲಿ ಮೂಲಭೂತ ಸಮಸ್ಯೆಗಳು ಇನ್ನೂ ಕೂಡ ಜೀವಂತವಾಗಿದೆ. ಶಾಂತೆಯAಡ ಕಪ್ ಹಾಕಿಗೆ ನಮ್ಮ ಸರಕಾರದಿಂದ ಅನುದಾನ ಸಿಕ್ಕರೂ ಕೂಡ ಸರಕಾರದಿಂದ ಸಿಕ್ಕಿಲ್ಲ ಎಂಬುದಾಗಿ ಪ್ರತಾಪ್ ಸಿಂಹ ಸುಳ್ಳು ಹೇಳುತ್ತಿದ್ದಾರೆ ಎಂದು ವೀಣಾ ಅಚ್ಚಯ್ಯ ದೂರಿದರು. ಕಾಂಗ್ರೆಸ್ ಅಭ್ಯರ್ಥಿಗಳು ಹೊರಗಿನವರಲ್ಲ; ಪ್ರತಾಪ್ ಸಿಂಹ ಹೊರಗಿನವರು ಎಂದು ನುಡಿದರು.

೨ ವರ್ಷಗಳಾದರೂ ಜಿಲ್ಲಾ ಪಂಚಾಯತ್‌ಗೆ ಚುನಾವಣೆ ನಡೆದಿಲ್ಲ; ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಆಗಿಲ್ಲ. ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಕೊಡಗಿನ ಶಾಸಕರುಗಳ ಸಾಧನೆ ಎಂದು ವೀಣಾ ಅಚ್ಚಯ್ಯ ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಅಡ್ಡಂಡ ಕಾರ್ಯಪ್ಪ ಅವರು ಕೆ.ಜಿ. ಬೋಪಯ್ಯ ಅವರೊಂದಿಗೆ ಇರುವುದರಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಅಡ್ಡಂಡ ಕಾರ್ಯಪ್ಪ ಅವರು ಕೊಡವ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡುವ ಸಂದರ್ಭ ಅದನ್ನು ವಿರೋಧಿಸದ ಕೆ.ಜಿ. ಬೋಪಯ್ಯ ಅವರೇ ಇದಕ್ಕೆ ನೇರ ಹೊಣೆ ಎಂದು ದೂರಿದರು.

ಗೋಷ್ಠಿಯಲ್ಲಿ ಡಿಸಿಸಿ ಸದಸ್ಯ ಲವಚಿಣ್ಣಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೌಶಿ ಕುಶಾಲಪ್ಪ, ಬೊಳ್ಳಜ್ಜಿರ ಅಯ್ಯಪ್ಪ ಉಪಸ್ಥಿತರಿದ್ದರು.