ಮಡಿಕೇರಿ, ಮೇ ೬: ಬಿಜೆಪಿ ಪರವಾಗಿ ಒಲವು ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ನಡೆ ನೋವುಂಟುಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಹೇಳಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಬಿಜೆಪಿಯ ಅಪ್ಪಚ್ಚು ರಂಜನ್ ಅವರ ಎದುರು ಹಲವು ಚುನಾವಣೆಗಳಲ್ಲಿ ಸೋಲನುಭವಿಸಿರುವ ಜೀವಿಜಯ ಅವರು ಈಗ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿರುವುದು ಸರಿಯಲ್ಲ ಎಂದರು. ಕಾಂಗ್ರೆಸ್‌ನಿAದ ಅವರಿಗೆ ಟಿಕೆಟ್ ಸಿಗದ ಸಂದರ್ಭ ಬೇರೆ ಯಾರನ್ನಾದರೂ ಸೂಚಿಸಿ ಎಂದಾಗಲೂ ಅವರು ಯಾರನ್ನೂ ಸೂಚಿಸಲಿಲ್ಲ. ಮಂಥರ್ ಗೌಡ ಅವರ ಕೈಯಲ್ಲಿ ರಾಜಕೀಯ ಸಾಧ್ಯವಿಲ್ಲ ಎನ್ನುವುದಾದರೆ ತಮ್ಮ ಮಕ್ಕಳನ್ನಾದರೂ ರಾಜಕೀಯವಾಗಿ ಜೀವಿಜಯ ಅವರು ಬೆಳೆಸಬಹುದಿತ್ತಲ್ಲ ಎಂದು ಚಂದ್ರಕಲಾ ಪ್ರಶ್ನಿಸಿದರು. ಈ ಬಾರಿ ಶಾಸಕರುಗಳು ಗೆದ್ದರೆ ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪ್ರತಾಪ್ ಸಿಂಹ ಅವರಿಗೆ ಜಿಲ್ಲೆಯ ಶಾಸಕರುಗಳನ್ನು ಮಂತ್ರಿಗಳಾಗಿಸಲು ಇಲ್ಲಿಯವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಚಂದ್ರಕಲಾ ಪ್ರಶ್ನಿಸಿದರು.

೨೫ ವರ್ಷಗಳಿಂದ ಶಾಸಕರಾಗಿರುವ ಅಪ್ಪಚ್ಚು ರಂಜನ್ ಅವರಿಂದ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನುಡಿದ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಶಾಲನಗರ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಜೀವಿಜಯ ಅವರು ತಮಗೆ ಟಿಕೆಟ್ ಸಿಗದಿದ್ದರೆ, ಟಿಕೆಟ್ ಸಿಗುವ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದಿದ್ದರು. ಆದರೆ, ಇದೀಗ ಅಪ್ಪಚ್ಚು ರಂಜನ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಲುತ್ತಾರೆ ಎಂದರೆ ಇದು ನಾಚಿಕೆಗೇಡಿನ ವಿಚಾರ ಎಂದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬ ಭಯದಿಂದ ಶಾಸಕರುಗಳು ಹತಾಶರಾಗಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಸೇವಾದಳ ಪ್ರಮುಖ ಕಾನೆಹಿತ್ಲು ಮೊಣ್ಣಪ್ಪ, ಕುಶಾಲನಗರ ಒಕ್ಕಲಿಗರ ಸಂಘದ ಪದಾಧಿಕಾರಿ ವಿ.ಜೆ. ನವೀನ್ ಉಪಸ್ಥಿತರಿದ್ದರು.