ಕೂಡಿಗೆ, ಮೇ ೫ : ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಕೂಡ್ಲೂರು ಕೈಗಾರಿಕಾ ಕೇಂದ್ರದ ರಾಜ್ ಕಾಫಿವರ್ಕ್ಸ್ಗೆ ಮಳೆಯ ನೀರು ನುಗ್ಗಿದ ಪರಿಣಾಮ ಶೇಖರಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಕಾಫಿ ಬೀಜಗಳು ನಾಶವಾಗಿವೆ.

ಕಾಫಿ ವರ್ಕ್ಗೆ ಗೇಟ್‌ನ ಮುಂಭಾಗದಲ್ಲಿ ಒಳ ಚರಂಡಿಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಹಿನ್ನೆಲೆ ಚರಂಡಿಯಲ್ಲಿ ಹೋಗಬೇಕಾದ ಮಳೆ ನೀರು ಕಾಫಿ ಕಣದ ಮೂಲಕ ಕಾಫಿ ಸಂಗ್ರಹಣಾ ಕೇಂದ್ರಕ್ಕೆ ನುಗ್ಗಿ ರಫ್ತು ಕಾಫಿ ಬೀಜಗಳು ಹಾಗೂ ಯಂತ್ರಗಳು ಹಾಳಾಗಿವೆ. ವಿದ್ಯುತ್ ಸರಬರಾಜು ಕೊಠಡಿಗೂ ನೀರು ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮಾಲೀಕ ಮಜೀದ್ ತಿಳಿಸಿದ್ದಾರೆ.