ಮಡಿಕೇರಿ, ಮೇ ೬: ಈ ಬಾರಿಯ ವಿಧಾನಸಭೆ ಚುನಾಣೆಯಲ್ಲಿ ಕೊಡಗಿನಲ್ಲಿ ಮತದಾರರು ಕೊಡಗಿನ ಸುಧಾರಣೆಗಾಗಿ ಬದಲಾವಣೆ ಬಯಸಿದ್ದಾರೆ ಎಂದು ಎಂ.ಎಲ್.ಸಿ. ಹೆಚ್. ವಿಶ್ವನಾಥ್ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚುನಾವಣಾ ಹಂತದಲ್ಲಿ ಎಲ್ಲ ಪಕ್ಷಗಳು ಉಚಿತ ಕೊಡುಗೆಗಳ ಬಗ್ಗೆ ಮಾತನಾಡಿವೆ. ಇವುಗಳನ್ನು ಕಾರ್ಯಗತಗೊಳಿಸಲು ಹಣವೆಲ್ಲಿದೆ ಎಂದು ಪ್ರಶ್ನಿಸಿದ ಅವರು, ಬೊಮ್ಮಾಯಿ ಅವರು ರೂ. ೩.೧೭ ಲಕ್ಷ ಕೋಟಿಯ ಬಜೆಟ್ ತಮ್ಮದೆಂದು ಹೇಳಿಕೊಳ್ಳುತ್ತಾರೆ. ಇದರಲ್ಲಿ ೧.೭೬ ಲಕ್ಷ ಕೋಟಿ ವೇತನಕ್ಕೆ ಬಳಕೆಯಾಗಿ ಹೋಗುತ್ತದೆ, ಇದರ ಮೇಲೆ ೭ ಸಾವಿರ ಕೋಟಿ ಸಾಲವಿದ್ದು, ಉಚಿತ ಕೊಡುಗೆಗಳಿಗೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಈ ರಾಷ್ಟçದ ಪ್ರಧಾನಿಯಾಗಿದ್ದು, ಅವರನ್ನು ಗೌರವಿಸುತ್ತೇನೆ. ಆದರೆ, ಅವರ ಮನಸು ಬದಲಾವಣೆಯಾಗಬೇಕು, ಭಾರತದಷ್ಟು ವಿಶಾಲವಾಗಬೇಕೆಂದು ಅಭಿಪ್ರಾಯಿಸಿದ ವಿಶ್ವನಾಥ್, ಇಂದು ರಾಜ್ಯಕ್ಕೆ ಪದೇ ಪದೇ ಬರುತ್ತಿರುವ ಮೋದಿ ಅವರು, ೬ ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವ ಬಗ್ಗೆ , ಒಂದು ಸಾವಿರ ಪ್ರೌಢ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿರುವ ಬಗ್ಗೆ, ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು ಎಂದು ಬಯಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಅಂಶ ಪ್ರಸ್ತಾಪಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಜರಂಗದಳ ಮತ್ತು ಆಂಜನೇಯ ಬೇರೆ ಬೇರೆ. ಭಜರಂಗದಳ ಎನ್ನುವುದು ಒಂದು ಸಂಘಟನೆ, ಈ ಸಂಘಟನೆ ನೈತಿಕ ಪೊಲೀಸ್ ಗಿರಿಯಲ್ಲಿ ನಿರತವಾದ ಸಂಘಟನೆಯೆAದು ಟೀಕಿಸಿ, ಇದಕ್ಕೆ ಕೊನೆ ಹಾಡಬೇಕಾಗಿದೆಯೆಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹೆಚ್.ಎಸ್. ಚಂದ್ರಮೌಳಿ ಅವರು ಮಾತನಾಡಿ, ಕೊಡಗಿನಲ್ಲಿ ರಾಜಕೀಯ ಬದಲಾವಣೆಯ ತಂಗಾಳಿ ಬೀಸುತ್ತಿದೆ. ಸುದೀರ್ಘ ಆಡಳಿತ ನಡೆಸಿದವರಿಗೆ ವಿರಾಮ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಟಿ.ಪಿ.ರಮೇಶ್, ಕೆ.ಎಂ. ಲೋಕೇಶ್, ಎಂ.ಎ.ಉಸ್ಮಾನ್, ಪಿ.ಸಿ. ಹಸೈನಾರ್ ಉಪಸ್ಥಿತರಿದ್ದರು.