ಸೋಮವಾರಪೇಟೆ, ಮೇ ೫ : ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಇದೀಗ ಬಹುಚರ್ಚಿತವಾಗಿರುವ ಮಾಜೀ ಸಚಿವ ಬಿ.ಎ. ಜೀವಿಜಯ ಅವರ ನಡೆ ದಿನಕ್ಕೊಂದು ಬೆಳವಣಿಗೆಗೆ ಕಾರಣವಾಗುತ್ತಿದೆ.

ಈ ನಡುವೆ ಒಂದು ಹೆಜ್ಜೆ ಮುಂದಕ್ಕೆ ಎಂಬAತೆ ಜೀವಿಜಯ ಅವರ ಪುತ್ರ, ಜಿ.ಪಂ. ಮಾಜೀ ಸದಸ್ಯ ಸಂಜಯ್ ಜೀವಿಜಯ ಅವರು ತನ್ನ ಅಪ್ಪನಿಗೆ ‘ವಯಸ್ಸಾಗಿದೆ..ಅರಳು ಮರಳು ಆಗಿದ್ದಂಗೆ ಕಾಣುತ್ತಿದೆ’ ಎಂದು ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಚರ್ಚೆಗೆ ಆಸ್ಪದ ನೀಡಿದೆ.

ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಸಂಜಯ್ ಅವರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜಕೀಯಕ್ಕಾಗಿ ತನ್ನ ತಂದೆಗೆ ಅರಳು ಮರಳು ಆಗಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಚುನಾವಣೆಗಾಗಿ ಈ ಮಟ್ಟಕ್ಕೂ ಇಳಿಯಬಹುದೇ? ಎಂದು ಕೆಲವರು ಪ್ರಶ್ನಿಸಿದ್ದರೆ, ಕಾಂಗ್ರೆಸ್ ಬಿಟ್ಟಿರುವ ಜೀವಿಜಯ ಅವರು ಜೆಡಿಎಸ್ ಹಾಗೂ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿರುವುದಕ್ಕೆ ಅವರ ಪುತ್ರ ನೀಡಿದ ಸ್ಪಷ್ಟನೆ ಸರಿಯಾಗಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.

“ನಮ್ಮ ತಂದೆ ಜೀವಿಜಯ ಅವರು ಈಗ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಜೆಡಿಎಸ್ ಅಥವಾ ಬಿಜೆಪಿಗೆ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. ಅವರಿಗೆ ಈಗ ೮೬ ವರ್ಷ ಆಗಿದೆ. ಅವರಿಗೆ ವಯಸ್ಸಾಗಿರುವುದರಿಂದ ಸ್ವಲ್ಪ ಅರಳು ಮರಳು ಆಗಿದಂಗೆ ಕಾಣ್ತಾ ಇದೆ. ಮಡಿಕೇರಿ ಕ್ಷೇತ್ರದ ಜನತೆ ಮತ್ತು ಬೆಂಬಲಿಗರು ಅವರ ಮಾತನ್ನು ಜಾಸ್ತಿ ತಲೆಗೆ ಹಚ್ಚಿಕೊಳ್ಳದೆ ಬದಲಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರನ್ನು ಬೆಂಬಲಿಸಬೇಕು” ಎಂದು ೧.೧೩ ನಿಮಿಷದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಅನೇಕರು ಖೇದ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಂದೆಯ ಬಗ್ಗೆಯೇ ಅರಳು ಮರಳು ಎಂದಿರುವುದು ಸಹಜವಾಗಿ ಜೀವಿಜಯ ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ರಾಜಕಾರಣಿಯ ಬಗ್ಗೆ ಇಂತಹ ಹೇಳಿಕೆ ಪುತ್ರನಿಗೆ ಶೋಭೆ ತರುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಜೀವಿಜಯ ಅವರಿಗೆ ವಯಸ್ಸಾಗಿದೆ. ಅವರ ರಾಜಕೀಯ ಶಕ್ತಿ ಮುಂಚಿನAತಿಲ್ಲ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಪರ ಮತಯಾಚನೆ ಮಾಡುತ್ತಿರುವುದು ಸರಿಯಲ್ಲ. ಅವರ ಬಗ್ಗೆ ಪುತ್ರ ಸಂಜಯ್ ಜೀವಿಜಯ ಸರಿಯಾಗಿಯೇ ಹೇಳಿದ್ದಾರೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.