ಮಡಿಕೇರಿ, ಮೇ ೫: ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತಾದ ತಮ್ಮ ಪರಿಕಲ್ಪನೆ, ಸಾಮಾಜಿಕ ಚಟುವಟಿಕೆ, ಸಾಮರ್ಥ್ಯ... ಅರ್ಹತೆಗಳ ಬಗ್ಗೆ ಮಾತನಾಡದೆ ಸೋಲಿನ ಹತಾಶೆಯ ಭಯದಿಂದ ಕೇವಲ ನಿರಾಧಾರ ಆರೋಪಗಳು, ವೈಯಕ್ತಿಕ ಟೀಕೆಗಳು, ವ್ಯಕ್ತಿಗತ ತೇಜೋವಧೆಯಂತಹ ಕ್ಷÄಲ್ಲಕ ವಿಚಾರಗಳ ಮೂಲಕ ಚುನಾವಣೆ ಎದುರಿಸುವ ಪ್ರಯತ್ನದ ಷಡ್ಯಂತ್ರ ನಡೆಸಲಾಗುತ್ತಿದೆ. ಆದರೆ ಕ್ಷೇತ್ರದಲ್ಲಿ ಎಲ್ಲಾ ಜಾತಿ - ಜನಾಂಗದವರು, ಮತದಾರರು ತಮ್ಮ ಮೇಲೆ ವಿಶ್ವಾಸವಿರಿಸಿದ್ದು, ಇವರೆಲ್ಲರ ಬೆಂಬಲದೊAದಿಗೆ ಈ ಬಾರಿ ಜಯಗಳಿಸಲಿರುವುದಾಗಿ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎ.ಎಸ್. ಪೊನ್ನಣ್ಣ ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಶಕ್ತಿ’ ಸಂದರ್ಶನದಲ್ಲಿ ಅವರು ತಮ್ಮ ವಿಚಾರಧಾರೆಗಳನ್ನು ಬಿಚ್ಚಿಟ್ಟರು. ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿರುವುದು ಖಚಿತ. ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಈ ವಾತಾವರಣ ಇದೆ. ಜನರು ಪ್ರಜ್ಞಾವಂತರಾಗಿದ್ದು, ಕ್ಷೇತ್ರದ ಭವಿಷ್ಯದ ಹಿತದೃಷ್ಟಿಯನ್ನು ಅವಲೋಕಿಸಿ ಈ ಬಾರಿ ತಮಗೆ ಅವಕಾಶ ನೀಡಲಿದ್ದಾರೆ ಎಂಬುದು ತನ್ನ ನಂಬಿಕೆಯಾಗಿದೆ. ತಾವು ಎಲ್ಲೂ ವೈಯಕ್ತಿಕ ಟೀಕೆ, ಜಾತಿ ರಾಜಕೀಯ, ಧರ್ಮ ರಾಜಕೀಯ ಮಾಡುತ್ತಿಲ್ಲ, ಬದಲಾಗಿ ರಸ್ತೆ, ನೀರು, ಆರೋಗ್ಯ, ಶಿಕ್ಷಣ, ಕಂದಾಯ ಸಮಸ್ಯೆ, ಮಾನವ - ವನ್ಯಜೀವಿ ಸಂಘರ್ಷಕ್ಕೆ ಪರಿಹಾರ, ರೈತರ ಸಮಸ್ಯೆಗಳು, ಕೊಡಗಿನಲ್ಲಿ ಕಗ್ಗಂಟಾಗಿಯೇ ಉಳಿದಿರುವ ಹಲವಾರು ಸಮಸ್ಯೆಗಳ ಪರಿಹಾರದಂತಹ ಹಿತದೃಷ್ಟಿಯ ಚಿಂತನೆಯನ್ನು ಜನತೆಯ ಮುಂದಿರಿಸಿ ಚುನಾವಣೆ ಎದುರಿಸುತ್ತಿರುವುದಾಗಿ ಪೊನ್ನಣ್ಣ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಬೆಂಬಲಿಸುತ್ತಿರುವುದು ಅವರ ಅಭಿಮಾನವಾಗಿದೆ. ಇದು ಎಲ್ಲರಿಗೂ ಅನ್ವಯವಾಗುತ್ತದೆ ಎಂದರು. ತಮ್ಮ ಬಗ್ಗೆ ಎಲ್ಲಾ ವರ್ಗದವರು ಅಭಿಮಾನ ಹೊಂದಿದ್ದು, ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದಕ್ಕೆ ನ್ಯಾಯ ಒದಗಿಸುವುದು ತಮ್ಮ ಗುರಿಯಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಹಲವಷ್ಟು ಸಮಸ್ಯೆಗಳಿದ್ದು, ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಜನರಲ್ಲಿದೆ. ಕೇವಲ ಒಂದಷ್ಟು ಮುಖ್ಯ ರಸ್ತೆಗಳನ್ನು ಸರಿಪಡಿಸಿದರೆ ಅದು ಸಮಗ್ರ ಅಭಿವೃದ್ಧಿಯಲ್ಲ, ಕ್ಷೇತ್ರದಲ್ಲಿ ಹಲವಷ್ಟು ರಸ್ತೆಗಳು ಇನ್ನೂ ದುಸ್ಥಿತಿಯಲ್ಲಿವೆ. ಕೂಟಿಯಾಲ ರಸ್ತೆಯಂತಹ ಸವಾಲಿನ ಕೆಲಸಗಳತ್ತ ಗಮನ ಹರಿಸಿಲ್ಲ. ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಅವರು ಹಾಲಿ ಶಾಸಕರ ಕುರಿತಾಗಿ ಟೀಕಿಸಿದರು. ಕಳೆದ ನಾಲ್ಕೂವರೆ ವರ್ಷಗಳ ಕಾಲ ಮುಖ್ಯರಸ್ತೆ ಹೇಗಿತ್ತು ಎಂದು ಪ್ರಶ್ನಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಒಂದಷ್ಟು ತೇಪೆ ಹಚ್ಚಲಾಗಿದೆ. ಇದರ ಉದ್ದೇಶವೇನು ಎಂಬುದು ಜನತೆಗೆ ಅರಿವಾಗುತ್ತದೆ. ಯಾವುದೇ ವಿಶೇಷ ಅನುದಾನಗಳು ಕ್ಷೇತ್ರಕ್ಕೆ ಬಂದಿಲ್ಲ. ಪ್ರಾಕೃತಿಕ ವಿಕೋಪಕ್ಕೆ ಒಂದಷ್ಟು ಹಣ ಬಂದಿದ್ದರೂ ಇದು ಶಾಸಕರ ವಿಶೇಷ ಪ್ರಯತ್ನವಲ್ಲ ಎಂದು ಅವರು ಹೇಳಿದರು. ಸುಳ್ಳು ಆರೋಪಗಳಿಗೆ ಜನರು ಮನ್ನಣೆ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರಸ್ತುತ ಮೋದಿ ಅವರ ಹೆಸರಿನಲ್ಲಿ ಮತ ಕೇಳಲಾಗುತ್ತಿದೆ, ಕಳೆದ ಚುನಾವಣೆಯಲ್ಲೂ ಇದೇ ನಡೆದಿತ್ತು. ಮೋದಿ ಅವರು ಇಡೀ ದೇಶದ ಪ್ರಧಾನಿಗಳಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಅವರ ಹೆಸರು ಬಳಸಿ ಮತ ಕೇಳುವುದು ಸರಿಯಲ್ಲ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ, ಮತ್ತಿತರ ಸ್ಥಿತಿಗತಿಗಳ ವಾಸ್ತವದ ಬಗ್ಗೆ ಪ್ರಧಾನಿಗಳ ಅರಿವಿಗೆ ಬಂದಿರಲಿಕ್ಕಿಲ್ಲ ಎಂದು ಹೇಳಿದ ಪೊನ್ನಣ್ಣ ಅವರು, ಪ್ರಧಾನಿಯಂತಹ ವ್ಯಕ್ತಿಯನ್ನು ಅವಲಂಬಿಸಿ ಚುನಾವಣೆ ಎದುರಿಸುವಂತಾಗಿರುವುದು ಬಿಜೆಪಿಯ ಅಸಹಾಯಕತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ನ ಪ್ರಣಾಳಿಕೆಯ ಗೊಂದಲದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೊನ್ನಣ್ಣ, ಈ ಬಗ್ಗೆ ಪಕ್ಷದ ಪ್ರಮುಖರಾದ ವೀರಪ್ಪಮೊಯಿಲಿ ಅವರು ಸ್ಟಷ್ಟನೆ ನೀಡಿದ್ದಾರೆ ಎಂದಷ್ಟೇ ಪ್ರತಿಕ್ರಿಯಿಸಿದರು.
ಕೇವಲ ಜನಪರವಾದ ಕೆಲಸ - ಅಭಿವೃದ್ಧಿಯ ಚಿಂತನೆಯಷ್ಟೇ ತಮ್ಮ ನಿಲುವಾಗಿದೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಆದರೆ, ಹಾಲಿ ಶಾಸಕರು ಕಳೆದ ೨೦ ವರ್ಷಗಳಿಂದ ಸೂಕ್ತ ಅಭಿವೃದ್ಧಿಯತ್ತ ಚಿತ್ತ ಹರಿಸದೆ ಇದೀಗ ಕೇವಲ ಜನರ ಭಾವನೆಗಳ ಜೊತೆ ರಾಜಕೀಯ ಮಾಡುತ್ತಿರುವುದು ಶೋಭೆಯಲ್ಲ ಎಂದ ಅವರು, ಕಣದಲ್ಲಿ ಇತರ ಪ್ರತಿಸ್ಪರ್ಧಿಗಳಿದ್ದರೂ, ತಮ್ಮ ಬಗ್ಗೆ ಜನರು ಭರವಸೆ ಇಟ್ಟಿದ್ದು, ಇದಕ್ಕೆ ಬದ್ಧರಾಗಿ ನಡೆದುಕೊಳ್ಳುವುದಾಗಿ ನುಡಿದರಲ್ಲದೆ, ವೀರಾಜಪೇಟೆಯನ್ನು ಮಾದರಿ ಕ್ಷೇತ್ರವಾಗಿ ಬದಲಾಯಿಸುವುದಾಗಿ ಹೇಳಿದರು.