ಪೊನ್ನಂಪೇಟೆ, ಮೇ ೪: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ, ಸ್ತಿçÃಶಕ್ತಿ ಒಕ್ಕೂಟಗಳ ವತಿಯಿಂದ ಪೊನ್ನಂಪೇಟೆಯಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಆಯೋಜಿಸಲಾಗಿದ್ದ, ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್ ಉದ್ಘಾಟಿಸಿದರು.
ಜಿಲ್ಲಾ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಚುನಾವಣಾ ರಾಯಭಾರಿ ರವಿ ಮುತ್ತಪ್ಪ, ಪೊನ್ನಂಪೇಟೆ ತಾಲೂಕು ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ರಜಿನಿ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ವಿಜಯ್ ಉಪಸ್ಥಿತರಿದ್ದರು. ಕೊಡಗು ಮತ್ತು ಮತದಾನ ವಿಷಯ ಕುರಿತಂತೆ ೧೮ ವರ್ಷ ಒಳಪಟ್ಟ ಹಾಗೂ ೧೮ ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಪ್ರತ್ಯೇಕವಾಗಿ ಎರಡು ವಿಭಾಗಗಳಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು.
೧೮ ವರ್ಷದೊಳಗಿನ ವಿಭಾಗದಲ್ಲಿ ಬಿ. ಮಂಜುಳ ಪ್ರಥಮ, ಕೆ.ಕೆ. ಅಜಿತ ದ್ವಿತೀಯ, ಎಸ್. ಭಾರತಿ ತೃತೀಯ ಬಹುಮಾನ, ೧೮ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕೆ. ಅಮೃತ ಪ್ರಥಮ, ಜಿ.ಹೆಚ್.ವಿದ್ಯಾ ದ್ವಿತೀಯ ಹಾಗೂ ಸಂಚಿತ ತೃತೀಯ ಬಹುಮಾನ ಪಡೆದುಕೊಂಡರು. ಸಿಆರ್‌ಪಿ ತಿರುನೆಲ್ಲಿಮಡ ಜೀವನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಿಆರ್‌ಪಿ ವಾಮನ ನಿರೂಪಿಸಿದರು.
ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ಪಬ್ಲಿಕ್ ಶಾಲೆಯಿಂದ ಪೊನ್ನಂಪೇಟೆ ಬಸ್ ನಿಲ್ದಾಣದವರೆಗೆ ಮತದಾನ ಜಾಗೃತಿ ಜಾಥಾ ನಡೆಯಿತು. ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.