ಸಿದ್ದಾಪುರ, ಮೇ ೪: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡುವ ಪ್ರಕ್ರಿಯೆ ನಡೆಯಿತು. ಚುನಾವಣೆ ನಡೆಯುವ ಮತ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ೮೦ ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಅಂಚೆ ಮೂಲಕ ಮತದಾನ ಮಾಡಲು ೨೦ ಮಂದಿ ಮತದಾರರು ಅರ್ಜಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳ ತಂಡ ಹುಂಡಿ, ಅಂಚೆತಿಟ್ಟು, ಬಾಡಗ ಬಾಣಂಗಾಲ, ಜನತಾ ಕಾಲೋನಿ, ಹಣ್ಣಿನತೋಟ ಹಾಡಿಯ ಮತದಾರರ ಮನೆಗಳಿಗೆ ತೆರಳಿ ನಿಯಮಾನುಸಾರ ಅಗತ್ಯ ಪ್ರಕ್ರಿಯೆಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿ ಮತದಾನ ಮಾಡಿಸಿಕೊಂಡರು. ಮಾಲ್ದಾರೆಯ ಬಾಡಗ ಬಾಣಂಗಾಲ ಗ್ರಾಮದ ಮೈಲಾಪುರ ೧೨೦ರ ಮತಗಟ್ಟೆಯಲ್ಲಿ ಹಿರಿಯ ಮತದಾರರಾದ ಅಜ್ಜನಿಕಂಡ ಪೂವಯ್ಯ (೧೦೨ ವರ್ಷ) ಶತಾಯುಷಿ ಅವರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿ ಗುರುಶಾಂತಪ್ಪ, ಲೋಕೇಶ್, ಸತೀಶ್, ಪ್ರವೀಣ್, ಬಿ.ಎ. ಚಂದ್ರಾವತಿ, ಪೊಲೀಸ್ ಅಧಿಕಾರಿ ಹರೀಶ್ ಹಾಜರಿದ್ದರು.