ಕಣಿವೆ, ಮೇ ೪: ಕಳೆದ ಮೂರು ದಶಕಗಳ ಈಚೆಗೆ ಕೃಷಿಕರ ಪಾಲಿನ ಮುಖ್ಯ ಬೆಳೆಯೇ ಆಗಿ ಹೋಗಿರುವ ಪ್ರಮುಖ ವಾಣಿಜ್ಯ ಬೆಳೆ ಶುಂಠಿಯನ್ನು ಜಿಲ್ಲೆಯಾದ್ಯಂತ ರೈತರು ಕೈಗೊಂಡಿದ್ದಾರೆ. ಶುಂಠಿ ಬೆಳೆಯ ದರ ಏರಿಕೆ ಕೇವಲ ಕೃಷಿಕರ ಪಾಲಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಅದು ಬಂಡವಾಳ ಶಾಹಿಗಳನ್ನು, ರಿಯಲ್ ಎಸ್ಟೇಟ್ ಉದ್ಯಮಿಗಳು, ಸರ್ಕಾರಿ ನೌಕರಿಯಲ್ಲಿ ರುವವರು ಹೀಗೆ ಬಹಳಷ್ಟು ಮಂದಿಯನ್ನು ತನ್ನತ್ತ ಆಕರ್ಷಿಸಿಬಿಟ್ಟಿದೆ. ಈ ಮಾಯಾ ಬೆಳೆಯ ಬೆನ್ನುಹತ್ತಿ ಹೋದ ಬಹಳಷ್ಟು ಮಂದಿ ಈ ಬೆಳೆಯ ಸಹವಾಸವೇ ಬೇಡ ಅಂದುಕೊAಡು ಬಹಳ ದೂರ ಸರಿದಿದ್ದಾರೆ.
ಕೆಲವೇ ಕೆಲವು ಮಂದಿ ಈ ಅದೃಷ್ಟದ ಬೆಳೆ ಶುಂಠಿಯಿAದಾಗಿ ಸಕಲ ಸಂಪದ್ಭರಿತರಾಗಿದ್ದಾರೆ. ಸಂಬಳ ಹಾಗೂ ಗಿಂಬಳದ ಹಣದಿಂದ ಶುಂಠಿ ಬೆಳೆಯ ಹಿಂದೆ ಹೋದ ಕೆಲವು ಸರ್ಕಾರಿ ನೌಕರರು ದಿಢೀರ್ ಶ್ರೀಮಂತರಾಗಿದ್ದು ನೌಕರಿಯನ್ನೇ ತ್ಯಜಿಸಿದವರೂ ಇದ್ದಾರೆ. ಹಾಗಾಗಿ ಕೃಷಿಕರು, ಬಂಡವಾಳಶಾಹಿಗಳು ಮೊದಲಾದವರು ಅತಿ ಹೆಚ್ಚಾಗಿ ಬೆಳೆಯುತ್ತಿರುವ ಶುಂಠಿ ಬೆಳೆಗೆ ಮಾರುಕಟ್ಟೆಯಲ್ಲಿ ಈ ಬಾರಿ ಉತ್ತಮ ದರ ಲಭ್ಯವಾಗುತ್ತಿದೆ.
೬೦ ಕೆ.ಜಿ. ತೂಕದ ಒಂದು ಚೀಲ ಶುಂಠಿಗೆ ಪ್ರಸಕ್ತ ೭,೫೦೦ ರಿಂದ ೮,೫೦೦ ರೂಪಾಯಿಗಳಿದೆ. ಮೇ ತಿಂಗಳ ಮೊದಲ ವಾರದಲ್ಲಿ ಇದೇ ದರ ಮತ್ತಷ್ಟು ಹೆಚ್ಚಲಿದೆ ಎನ್ನಲಾಗುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಸತತವಾಗಿ ಎರಡೂ ವರ್ಷಗಳ ಕಾಲ ಶುಂಠಿಯ ದರ ಕುಸಿತದಿಂದಾಗಿ ಮೇಲಿಂದ ಮೇಲೆ ಕೈಸುಟ್ಟುಕೊಂಡಿದ್ದ ಸಣ್ಣ ಪುಟ್ಟ ಬೆಳೆಗಾರರು ಕಳೆದ ವರ್ಷ ಶುಂಠಿ ಬೆಳೆಯಿಂದ ಅಂತರ ಕಾಯ್ದುಕೊಂಡಿದ್ದರು.
ನಷ್ಟವಾದರೂ ಕೂಡ ಲೆಕ್ಕಿಸದೇ ಕೈಸಾಲ ಸೋಲ ಮಾಡಿ, ಒಡವೆಗಳನ್ನು ಅಡವಿಟ್ಟು ಹಣ ತಂದು ಅದೃಷ್ಟ ಪಣಕ್ಕಿಟ್ಟು ಶುಂಠಿ ಬೆಳೆದವರಿಗೆ ಅದೃಷ್ಟವಶಾತ್ ಉತ್ತಮ ದರ ದೊರಕಿತು. ಮೂರು ವರ್ಷಗಳ ಹಿಂದೆ ಒಂದು ಚೀಲ ಶುಂಠಿಗೆ ಕೇವಲ ರೂ. ೯೦೦ ರಿಂದ ೧೧೦೦ ಇದ್ದದ್ದು ಕಳೆದ ವರ್ಷ ೨೦೨೨ ರ ಆಗಸ್ಟ್ನಲ್ಲಿ ಒಂದೇ ಸಮನೆ ೨೦೦೦ ದಾಟಿತ್ತು. ಬಳಿಕ ಈ ದರ ಮೇಲ್ಮುಖವಾಗಿಯೇ ಸಾಗಿ ಕೆಲವು ದಿನ ೨,೫೦೦, ೩,೦೦೦ ಕೊನೆಗೆ ೫,೦೦೦, ೮,೫೦೦ ರೂಪಾಯಿಗಳ ತನಕ ಏರು ಗತಿಯಲ್ಲೇ ಸಾಗಿದೆ.
ಬೆಳೆದ ಹೊಲದಲ್ಲೇ ಉತ್ತಮ ಬೆಲೆಗಾಗಿ ಕಾದು ಬೆಳೆಯನ್ನು ಜೋಪಾನ ಮಾಡಿದಂತಹ ಬಂಡವಾಳ ಶಾಹಿ ಕೃಷಿಕರು ಏರಿದ ಶುಂಠಿ ಬೆಲೆಯ ಹೆಚ್ವಿನ ಫಲಾನುಭವಿಗಳಾದರು. ಈಗಲೂ ಫಸಲನ್ನು ಹೊಂದಿರುವವರು ಇನ್ನಷ್ಟು ದುಬಾರಿ ಬೆಲೆಗಾಗಿ ಕಾಯುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಪ್ರಸಕ್ತ ಇರುವ ಉತ್ತಮ ದರದಿಂದ ಪುಳಕಿತರಾಗಿರುವ ಈ ವರ್ಷ ಬಿತ್ತನೆ ಮಾಡಿರುವ ಕೃಷಿಕರು ಮುಂದಿನ ನಾಲ್ಕರಿಂದ ಐದು ತಿಂಗಳ ಅವಧಿ ಬೆಳೆಯನ್ನು ಸಂರಕ್ಷಿಸಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದು ನಿತ್ಯವೂ ದೇವರಿಗೆ ಕೈಮುಗಿಯುತ್ತಿದ್ದಾರೆ.
ಹರ್ಷ ತಂದ ಮಳೆ
ಈ ಬಾರಿ ಕಳೆದ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಶುಂಠಿ ಬಿತ್ತನೆ ಮಾಡಿರುವ ಕೃಷಿಕರ ಪಾಲಿಗೆ ಕಳೆದ ಎರಡು ದಿನಗಳ ಕಾಲ ಕೆಲವೆಡೆಗಳಲ್ಲಿ ದಿಢೀರನೇ ಸುರಿದ ಸಾಮಾನ್ಯ ಮಳೆ ಈಗಷ್ಟೆ ಚಿಗುರೊಡೆದು ಮೇಲೆ ಕಾಣುತ್ತಿರುವ ಶುಂಠಿಗೆ ಜೀವ ಕಳೆ ತಂದಿದೆ. ಇದರಿಂದ ಮಳೆಯಾದ ಪ್ರದೇಶಗಳ ಕೃಷಿಕರು ಹರ್ಷಗೊಂಡಿದ್ದು ವರುಣ ದೇವನಿಗೆ ನಮಿಸುತ್ತಿದ್ದಾರೆ. ಮಳೆಯೇ ಸುರಿಯದಿರುವ ಭಾಗಗಳ ಹಲವು ಕೃಷಿಕರು ಬಿತ್ತಿದ ಶುಂಠಿ ಬೀಜದ ಉಳಿವಿಗಾಗಿ ವರುಣನಿಗೆ ಮೊರೆಯಿಡುತ್ತಿದ್ದಾರೆ.
- ಕೆ.ಎಸ್. ಮೂರ್ತಿ