ಮಡಿಕೇರಿ, ಮೇ. ೪: ಐತಿಹಾಸಿಕ ಹಿನ್ನೆಲೆಯಿರುವ ಕೊಡಗು ಜಿಲ್ಲೆಯ ಏಕೈಕ, ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ಕೋಂದAಡರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ೩ನೇ ದಿನದಂದು ಬ್ರಹ್ಮಕುಂಭಾಭಿಷೇಕ ದೊಂದಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದವು.

ಇಂದು ಬೆಳಿಗ್ಗೆ ೬ ಗಂಟೆಗೆ ಮಡಿಕೇರಿ ಶ್ರೀ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ, ಮೈಸೂರಿನ ಕೆ. ಶ್ರೀನಿವಾಸ್ ಉಪಾಧ್ಯ ನೇತೃತ್ವದಲ್ಲಿ ಗಣಪತಿ ಹೋಮ, ವಿಶೇಷ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಪ್ರತಿಷ್ಠಾ ಹೋಮ, ಬೆಳಿಗ್ಗೆ ೭.೪೫ರ ವೃಷಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ತತ್ವಕಲಾ ಹೋಮ, ಪೂರ್ಣಾಹುತಿ, ಬೆ. ೧೦.೦೫ ರ ಮಿಥುನ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ, ವ್ಯಾಸ ಪೂಜೆ, ಅಲಂಕಾರ ಪೂಜೆ, ನೈವೇದ್ಯ ಮಹಾಪೂಜೆ ನೆರವೇರಿತು. ನಂತರ ಕ್ಷೇತ್ರದ ಮುಂದಿನ ನಿತ್ಯ ನೈಮಿತ್ತಿಕಾದಿಗಳ ಬಗ್ಗೆ ಪ್ರತಿಜ್ಞಾವಿಧಿ, ಪ್ರಸನ್ನ ಪೂಜೆ, ಆಚಾರ್ಯ ಪೂಜೆ, ಮಂಗಳ ಮಂತ್ರಾಕ್ಷತೆ, ರಾಷ್ಟಾçಶೀರ್ವಾದ ನಡೆಯಿತು.

ನಗರ ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕೋದಂಡರಾಮ ಜೀರ್ಣೋದ್ಧಾರ ಸಮಿತಿ, ಕೋದಂಡರಾಮ ದೇವಾಲಯ ಟ್ರಸ್ಟ್, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ, ಶ್ರೀರಾಮ ಸೇವಾ ಸಮಿತಿ, ಜ್ಯೋತಿ ಯುವಕ ಸಂಘ, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.