ಮಡಿಕೇರಿ, ಮೇ ೩: ಚುನಾವಣಾ ಆಯೋಗದ ನೀತಿ - ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಚುನಾವಣಾ ಕರ್ತವ್ಯಕ್ಕೆ ಬೂತ್‌ಮಟ್ಟದ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಸಿಬ್ಬಂದಿಯೋರ್ವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಆದೇಶಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಯ್ಯಂಗೇರಿ ಬಲಪಾರ್ಶ್ವ ಮತಗಟ್ಟೆ (ಮತಗಟ್ಟೆ ಸಂಖ್ಯೆ -೪೭)ಯ ಬೂತ್‌ಮಟ್ಟದ ಅಧಿಕಾರಿ (ಃಐಔ) ಜಮೀಲ ಐ.ಎ. ಅವರು ಇತ್ತೀಚೆಗೆ ಅಯ್ಯಂಗೇರಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುರಿತು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಅಂಗನವಾಡಿ ಕಾರ್ಯಕರ್ತೆಯಾಗಿರುವ ಇವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಇವರು ಅಯ್ಯಂಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಗತ ಭಾಷಣ ಮಾಡಿರುವುದು ತಿಳಿದುಬಂದಿದೆ. ಇದರಂತೆ ಇವರನ್ನು ಇದೀಗ ನಿಯೋಜಿತ ಹುದ್ದೆಯಿಂದ ಬಿಡುಗಡೆಗೊಳಿಸಿ ವಿಚಾರಣೆಯನ್ನು ಕಾಯ್ದಿರಿಸಿ ಕರ್ತವ್ಯದಿಂದ ಅಮಾನತ್ತುಗೊಳಿಸಿ ಚುನಾವಣಾಧಿಕಾರಿ ಸತೀಶ ಅವರು ಆದೇಶಿಸಿದ್ದಾರೆ. ಜಮೀಲ ಅವರು ಅಂಗನವಾಡಿ ಕಾರ್ಯಕರ್ತೆಯಾಗಿರುವುದರಿಂದ ಇಲಾಖಾ ನಿಯಮದಂತೆ ಕ್ರಮ ವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ.