'ಸೋಮವಾರಪೇಟೆ, ಮೇ ೩: ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ೯ನೇ ತರಗತಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಸಂಜೆಯವರೆಗೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಚೌಡ್ಲು ಗ್ರಾಮದ ಅರೆಬೆಟ್ಟ ನಿವಾಸಿ, ಕೂಲಿ ಕಾರ್ಮಿಕ ಸದಾಶಿವ ಮತ್ತು ಲೀಲಾ ದಂಪತಿ ಪುತ್ರ, ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ೮ನೇ ತರಗತಿ ಮುಗಿಸಿ ೯ನೇ ತರಗತಿಗೆ ತೇರ್ಗಡೆಯಾಗಿದ್ದ ಶರತ್ (೧೪) ಎಂಬಾತನೇ ನಾಪತ್ತೆಯಾಗಿರುವ ವಿದ್ಯಾರ್ಥಿ.

ಶರತ್, ತನ್ನ ತಂದೆ ಸದಾಶಿವ ಹಾಗೂ ಸಹೋದರನೊಂದಿಗೆ ಕಲ್ಕಂದೂರು ಕೆರೆಗೆ ತೆರಳಿದ್ದು, ಸಹೋದರನೊಂದಿಗೆ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದಾನೆ. ಈ ಸಂದರ್ಭ ಆಕಸ್ಮಿಕವಾಗಿ ನೀರಿನ ಆಳಕ್ಕೆ ಮುಳುಗಿದ್ದಾನೆ. ಇದನ್ನು ಗಮನಿಸಿದ ದಡದಲ್ಲಿದ್ದ ತಂದೆ ಸದಾಶಿವ ಅವರು ತಕ್ಷಣ ಕೆರೆಗೆ ಧುಮುಕಿ ಆತನನ್ನು ಉಳಿಸುವ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ.

ಗಾಬರಿಯಲ್ಲಿದ್ದ ತಂದೆಯೂ ಕೆರೆಯಲ್ಲಿ ಮುಳುಗುತ್ತಿದ್ದ ಸಂದರ್ಭ ಮತ್ತೋರ್ವ ಪುತ್ರ ತಕ್ಷಣ ಎಚ್ಚೆತ್ತುಕೊಂಡು ತಂದೆಯನ್ನು ದಡಕ್ಕೆ ಕರೆತಂದಿದ್ದಾನೆ. ನಂತರ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದು, ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಂಜೆಯವರೆಗೂ ನೀರಿನಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.