ಮಡಿಕೇರಿ, ಮೇ ೩: ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಅನಂತ್ ಕುಮಾರ್, ಕಾಂಗ್ರೆಸ್ನಿAದ ಹೊರನಡೆದು ಮಂಥರ್ ಗೌಡರನ್ನು ಸೋಲಿಸಲು ಪಣ ತೊಟ್ಟಿದ್ದೇನೆ ಎಂದಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಗ್ರಾ.ಪಂ. ತಾ. ಪಂಚಾಯತ್, ಸದಸ್ಯನಾಗಿ, ಕುಶಾಲನಗರ ಬ್ಲಾಕ್ ಅಧ್ಯಕ್ಷನಾಗಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದೇನೆ. ಪಕ್ಷದ ಜಿಲ್ಲಾ ಉಪಾಧ್ಯಕ್ಷನಾದರೂ ತನ್ನನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿದ್ದು, ಜಿಲ್ಲಾಧ್ಯಕ್ಷರ ಅಸಹಕಾರ ಸೇರಿದಂತೆ ನಾಯಕರ ನಿರ್ಲಕ್ಷö್ಯ ಧೋರಣೆಯಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಬಿಜೆಪಿ ಶಾಸಕರು ತನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳಲು ತೀರ್ಮಾನಿಸಿದ್ದೇನೆ. ಕೆಲ ದಿನಗಳಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದೆ. ತನ್ನೊಂದಿಗೆ ಸಾವಿರಾರು ಕಾರ್ಯ ಕರ್ತರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದಿರುವ ಅನಂತ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಪಣ ತೊಟ್ಟಿದ್ದೇನೆ ಎಂದು ಹೇಳಿದರು.
ಡಿಸಿಸಿ ಸದಸ್ಯ ಮಹಮ್ಮದ್ ರಫೀಕ್ ಮಾತನಾಡಿ, ಪಕ್ಷದ ನಾಯಕರ ವರ್ತನೆಯಿಂದ ನೋವಾಗಿದೆ. ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ತಾನು ಬಿಜೆಪಿ ಸೇರ್ಪಡೆಗೊಳ್ಳಲ್ಲ. ಮುಂದಿನ ನಡೆಯ ಬಗ್ಗೆ ಸದ್ಯದಲ್ಲೇ ತೀರ್ಮಾನಿಸುತ್ತೇನೆೆ ಎಂದರು. ದಸಂಸ ಜಿಲ್ಲಾ ಸಮಿತಿ ಸಂಚಾಲಕ ಡಿ.ಜೆ. ಈರಪ್ಪ ಮಾತನಾಡಿ, ಈವರೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪಣತೊಟ್ಟಿದ್ದೆವು. ಇದೀಗ ನಮ್ಮನ್ನು ಕಡೆಗಣಿಸುತ್ತಿರುವುದು ಬೇಸರ ತರಿಸಿದೆ. ಅನಂತ್ ಕುಮಾರ್ ಅವರ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್, ಹೂವಯ್ಯ ಕೆ.ಎನ್, ಶರೀಫ್ ಇಬ್ರಾಹಿಂ ಹಾಜರಿದ್ದರು.