ವೀರಾಜಪೇಟೆ, ಮೇ ೩: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರು ವೀರಾಜಪೇಟೆ ಪಟ್ಟಣದ ಪ್ರಮುಖ ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು.

ಪಟ್ಟಣದ ಶಿವಕೇರಿ ವಾರ್ಡ್ಗೆ ಮತಯಾಚನೆಗೆ ಬಂದ ಅಭ್ಯರ್ಥಿ ಎ.ಎಸ್. ಪೊನ್ನಣ್ಣರಿಗೆ ಅಲ್ಲಿನ ನಿವಾಸಿಗಳು, ಮತದಾರರು ಹೂವಿನ ಸುರಿಮಳೆಗೈದು ಸ್ವಾಗತ ಕೋರಿದರು.

ಬಳಿಕ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭ್ಯರ್ಥಿ ಪೊನ್ನಣ್ಣ ಮಾತನಾಡಿ, ಕೊಡಗಿನಲ್ಲಿ ಪೃಕೃತಿ ವಿಕೋಪದ ಸಂದರ್ಭ ತಮ್ಮ ತಂದೆಯ ಹೆಸರಿನಲ್ಲಿ ಈ ಕ್ಷೇತ್ರದ ಅನೇಕ ಜನರಿಗೆ ಕಿಟ್ ವಿತರಿಸಿದ್ದೇನೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಗಿನ ಹಲವು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಿ ಎಲ್ಲರಿಗೂ ಪರಿಚಿತನಾಗಿದ್ದು ಇದನ್ನು ಸಹಿಸದ ವಿರೋಧ ಪಕ್ಷದವರು ಇಲ್ಲ ಸಲ್ಲದ ಅಪವಾದಗಳನ್ನು ಮಾಡುತ್ತಿದ್ದಾರೆ ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಖಚಿತ ಎಂದರು.

ಇದಕ್ಕೂ ಮೊದಲು ಶಿವಕೇರಿ ಮಾರಿಯಮ್ಮ ದೇವಸ್ಥಾನದಲ್ಲಿ ಎ.ಎಸ್.ಪೊನ್ನಣ್ಣ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಪ.ಜಾತಿ ಪಂಗಡದ ಜಿಲ್ಲಾ ಅಧ್ಯಕ್ಷ ವಿ.ಕೆ.ಸತೀಶ್ ಪ್ರಾಸ್ತಾವಿಕವಾಗಿ ಸಭೆಯಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಗ್ರಾಮದ ಹಿರಿಯರಾದ ಪಾಪಯ್ಯ, ಪ್ರಮುಖರಾದ ಮಹಾದೇವ, ಗಣೇಶ್, ಪುರಸಭೆ ಸದಸ್ಯರಾದ ಡಿ.ಪಿ.ರಾಜೇಶ್, ಎಸ್.ಹೆಚ್. ಮತೀನ್, ಮಹ್ಮದ್ ರಾಫಿ, ಪೂರ್ಣಿಮ ಮತ್ತಿತರರು ಉಪಸ್ಥಿತರಿದ್ದರು.