ಅನಿಲ್ ಎಚ್.ಟಿ.
ಮಡಿಕೇರಿ, ಮೇ ೩: ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಆರ್. ಗುಂಡೂರಾವ್ ಹೃದಯವಂತಿಕೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಗುಂಡೂರಾವ್ ಅವರನ್ನು ಪ್ರತಿಸ್ಪರ್ಧಿಯಾಗಿ ಎದುರಿಸಿದ್ದು ರಾಜಕೀಯ ಜೀವನದ ಅವಿಸ್ಮರಣೀಯ ಅನುಭವ.
ಹೀಗೆಂದು ಹೇಳಿದ್ದು. ೧೯೮೩ ರಲ್ಲಿ ಗುಂಡೂರಾಯರನ್ನು ಸೋಲಿಸಿ ಜೈಂಟ್ ಕಿಲ್ಲರ್ ಎಂದೇ ಖ್ಯಾತರಾದ ಬಿ.ಎ.ಜೀವಿಜಯ. ೧೯೭೮ ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ಜೀವಿಜಯ ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಗುಂಡೂರಾವ್ ವಿರುದ್ದ ೩೬೦೮ ಮತಗಳ ಅಂತರದಿAದ ಸೋತಿದ್ದರು. ಬಳಿಕ ೧೯೮೩ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ವಿರುದ್ದ ಮತ್ತೊಮ್ಮೆ ಕಣಕ್ಕಿಳಿದ ಜೀವಿಜಯ ೩೧,೫೪೪ ಮತಗಳನ್ನು ಗಳಿಸಿದರು. ಗುಂಡೂರಾವ್ ೨೬,೧೬೨ ಮತಗಳನ್ನು ಪಡೆದರು. ಜೀವಿಜಯ ರಾಜ್ಯದ ಮುಖ್ಯಮಂತ್ರಿಯನ್ನು ೫೩೮೨ ಮತಗಳಿಂದ ಸೋಲಿಸಿ ಇತಿಹಾಸ ಬರೆದರು. ಈ ಮೂಲಕ ಕೊಡಗಿನವರಾದ ಗುಂಡೂರಾವ್ ಅವರು ಹ್ಯಾಟ್ರಿಕ್ ಗೆಲುವನ್ನು ಜೀವಿಜಯ ತಡೆದರು.
ಅಂದಿನ ಚುನಾವಣಾ ರಾಜಕೀಯ ಈಗಿಲ್ಲ. ಈಗ ಏನಿದ್ದರೂ ಹಣದ ಪ್ರಭಾವದ ರಾಜಕೀಯ, ನೈತಿಕತೆ, ಮೌಲ್ಯಗಳು ಎಂಬುದು ಕೇವಲ ಪದಗಳಿಗೇ ಸೀಮಿತವಾಗಿದೆ. ೧೯೮೩ ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರ ಪ್ರತಿಸ್ಪರ್ಧಿಯಾಗಿ ಜನತಾಪಕ್ಷದಿಂದ ಕಣಕ್ಕಿಳಿದ ಸಂದರ್ಭ ಸಾಕಷ್ಟು ಅಳುಕಿತ್ತು. ಆದರೆ ಜನತಾಪಾರ್ಟಿಯ ಕಾರ್ಯಕರ್ತರ ಬೆಂಬಲ ಅಗಾಧವಾಗಿತ್ತು. ಗುಂಡೂರಾವ್ ಅವರನ್ನು ಸೋಲಿಸಿದ ಬಳಿಕ ತಾನು ರಾಷ್ಟçಮಟ್ಟದಲ್ಲಿಯೇ ಗುರುತಿಸಿಕೊಂಡೆ. ಜನತಾಪಾರ್ಟಿಯ ನಾಯಕರಾದ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರು ಎಲ್ಲಾ ರೀತಿಯಲ್ಲಿಯೂ ಬೆಂಬಲವಾಗಿ ನಿಂತರು. ಹೀಗಾಗಿ ಜನತಾ ಪಾರ್ಟಿಯ ಸರ್ಕಾರದಲ್ಲಿ ಅರಣ್ಯ ಸಚಿವನಾಗಿ, ನಂತರ ಜನತಾ ಪಕ್ಷದ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವನಾಗಲು ಸಾಧ್ಯವಾಯಿತು. ಸಚಿವನಾಗಿದ್ದ ಸಂದರ್ಭ ಆರ್. ಗುಂಡೂರಾವ್ ಅನೇಕ ಸಲ ತನ್ನ ಬಳಿ ಬಂದು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಚುನಾವಣೆಯಲ್ಲಿ ನಾನವರನ್ನು ಸೋಲಿಸಿದರೂ ಅದನ್ನು ಗಂಭೀರವಾಗಿ ಮನಸ್ಸಿನಲ್ಲಿಟ್ಟುಕೊಳ್ಳದೇ ಗೆಳೆಯನಂತೆ ಕೊನೇಯವರೆಗೂ ನನ್ನನ್ನು ಕಂಡರು. ಈ ರೀತಿಯ ಗುಣವಿರುವ ರಾಜಕಾರಣಿ ಈಗಿನ ಕಾಲದಲ್ಲಿ ಬಹಳ ಅಪರೂಪ ಎಂದೂ ಜೀವಿಜಯ ಹೇಳಿಕೊಂಡರು.
ರಾಮಕೃಷ್ಣ ಹೆಗಡೆ ಪ್ರತೀ ಭಾನುವಾರ ಮೌನವೃತ ಆಚರಿಸುತ್ತಿದ್ದರು. ಯಾರೊಂದಿಗೂ ಅವರು ಮಾತನಾಡುತ್ತಿರಲಿಲ್ಲ. ಈಗಿನ ರಾಜಕೀಯ ಸನ್ನಿವೇಶದಲ್ಲಿ ಹಿರಿ ರಾಜಕಾರಣಿಗಳೂ ಎಲ್ಲವನ್ನೂ ಗಮನಿಸಿ, ಬೇಸರ ಪಡುತ್ತಾ ಮೌನವೃತಧಾರಿಗಳಾಗಿದ್ದಾರೆ. ಇದಕ್ಕೆ ನಾನೂ ಹೊರತಲ್ಲ ಎಂದೂ ಜೀವಿಜಯ ಹೇಳಿದರು.