೨೦೨೩ ರ ಮೇ ೧೦ ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಎಂಬ ಭೂಮಿಕೆಯಲ್ಲಿ ತಮ್ಮ ತಮ್ಮ ಪಕ್ಷಗಳ ಸ್ಪರ್ಧಿಗಳನ್ನು ಕಣದಲ್ಲಿ ಇಳಿಸಿ ಮತಗಳಿಕೆ ಎಂಬ ಕೃಷಿಯಲ್ಲಿ ತೊಡಗಿಸಿಕೊಂಡಿವೆ. ಇಲ್ಲಿ ಜನರಿಂದ ಮತ ಪಡೆಯುವ ಭರಾಟೆಯಲ್ಲಿ ರಾಜಕಾರಣಿಗಳು ತಮ್ಮ ನಾಲಿಗೆ ಮೇಲಿನ ‘ಹೊರಡುವ' ಶಬ್ದಗಳು ‘ಹೊರಳದ' ಹಾಗೆ ಎಚ್ಚರ ವಹಿಸಬೇಕಿದೆ.
ಏಕೆಂದರೆ ಅವಾಚ್ಯ ಶಬ್ದಗಳು ಹಾಗೂ ಅಸಂವಿಧಾನಿಕ ಪದಗಳು ಮಾಡಬಹುದಾದ ಘೋರ ಪರಿಣಾಮಗಳತ್ತ ಗಮನ ಹರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿಷ ಸರ್ಪ, ವಿಷಕನ್ಯೆ, ನಾಲಾಯಕ್, ಮನೆಹಾಳಾ ಹೀಗೆ ಇನ್ನೂ ಅನೇಕ ಅಸಂವಿಧಾನಿಕ ಪದಗಳ ಬಳಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದು ಆಯಾಯ ಪಕ್ಷಗಳ ಮೇಲೆ ಘೋರ ಪರಿಣಾಮ ಬೀರುತ್ತಿವೆ.
ಜನ ಅಥವಾ ಮತದಾರ ಪ್ರಭು ದಡ್ಡರಲ್ಲ. ವಿಚಾರವಂತರಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲವನ್ನೂ ಕ್ಷಣಾರ್ಧದಲ್ಲಿ ಗ್ರಹಿಸುತ್ತಿದ್ದಾರೆ. ಹಾಗಾಗಿ ರಾಜಕಾರಣಿಗಳು ತಾವಾಡುವ ಮಾತುಗಳ ಮೇಲೆ ನಿಗಾ ವಹಿಸುವುದೊಳಿತು.
ಕಳೆದ ಎರಡು ದಶಕಗಳ ಹಿಂದೆ ರಾಜಕಾರಣ ಮಾಡಿದ ಎಸ್.ಎಂ. ಕೃಷ್ಣ, ಮನಮೋಹನ್ ಸಿಂಗ್, ವಾಜಪೇಯಿ, ಎಲ್.ಕೆ. ಅಡ್ವಾಣಿ, ರಾಮಕೃಷ್ಣ ಹೆಗಡೆ, ಎಸ್. ನಿಜಲಿಂಗಪ್ಪ, ಎಸ್.ಆರ್. ಬೊಮ್ಮಾಯಿ ಮೊದಲಾದ ಪ್ರಬುದ್ಧ ರಾಜಕಾರಣಿಗಳು ಮೇಲೆತ್ತರದ ಸ್ಥಾನಗಳನ್ನು ಅಲಂಕರಿಸಿ ಅಧಿಕಾರ ನಡೆಸಿದರೂ ಕೂಡ ಯಾರನ್ನೂ ಯಾರೂ ಕೂಡ ವೈಯಕ್ತಿಕವಾಗಿ ಕೆಳಹಂತದ ಪದಗಳಿಂದ ಟೀಕಿಸಿದ ಉದಾಹರಣೆಗಳಿಲ್ಲ.
ಏಕೆಂದರೆ ಇವರುಗಳೆಲ್ಲಾ ಚುನಾವಣೆಗಳಲ್ಲಿ ಸೋಲು ಹಾಗೂ ಗೆಲುವುಗಳನ್ನು ಕಂಡ ಮುತ್ಸದ್ದಿಗಳಾಗಿದ್ದರು. ಯಾವತ್ತೂ ಕೂಡ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತೊಬ್ಬರ ಆತ್ಮಗೌರವಕ್ಕೆ ಕುಂದುAಟು ಮಾಡಿಕೊಂಡವರಲ್ಲ. ಹಿಂದೆ ನಡೆಯುತ್ತಿದ್ದ ಆರೋಗ್ಯಯುತ ಟೀಕೆಗಳು ಹಾಗೂ ಚರ್ಚೆಗಳು ಜನಸಾಮಾನ್ಯರಿಂದ ಮೆಚ್ಚುಗೆಯನ್ನು ಗಳಿಸಿದ್ದವು. ಬಹುಮುಖ್ಯವಾಗಿ ಪಕ್ಷದೊಳಗಿದ್ದುಕೊಂಡು ಪಕ್ಷವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ. ಪಕ್ಷವು ಆಂತರಿಕವಾಗಿ ಕೈಗೊಂಡ ನಿರ್ಣಯಗಳಿಗೆ ಇವರುಗಳು ಬದ್ಧರಾಗಿರುತ್ತಿದ್ದರು. ಇಲ್ಲವೇ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತಿದ್ದರು. ಹೊರಹೋದ ನಂತರವು ಯಾವುದೇ ವ್ಯಕ್ತಿಗಳ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರಲಿಲ್ಲ. ಅಂದಿನ ಕಾಲಘಟ್ಟದಲ್ಲಿದ್ದ ರಾಜಕಾರಣಿಗಳ ಧರ್ಮ, ಪಕ್ಷ ಹಾಗೂ ವಯಸ್ಸುಗಳು ಬೇರೆ ಬೇರೆ ಯಾಗಿದ್ದರೂ ಕೂಡ ಅವರಲ್ಲಿ ಪರಸ್ಪರ ಆತ್ಮೀಯತೆಯಿತ್ತು. ಪ್ರಸ್ತುತ ಬೆರಳೆಣಿಕೆಯ ರಾಜಕಾರಣಿಗಳನ್ನು ಹೊರತುಪಡಿಸಿ ಇನ್ನುಳಿದ ರಾಜಕಾರಣಿಗಳು ಯಾವುದೇ ತತ್ವ ಸಿದ್ಧಾಂತಗಳನ್ನು ಪಾಲಿಸದೆ ಅನುಕೂಲ ಸಿಂಧು ರಾಜಕಾರಣ ಮಾಡುತ್ತಾ ಅಧಿಕಾರದ ದುರಾಸೆಗಾಗಿ ದಿನಕ್ಕೊಂದು ಪಕ್ಷಕ್ಕೆ ಜಿಗಿಯುತ್ತ ಸ್ವಾರ್ಥ ಮೆರೆಯುತ್ತಿದ್ದಾರೆ.
ಹಾಗೆಯೇ ಕೆಲವು ರಾಜಕೀಯ ಪಕ್ಷಗಳು ಕೂಡ ಅಧಿಕಾರದ ಅಸೆಗಾಗಿ ವಿವಿಧ ಮನಸ್ಥಿತಿಯ ರಾಜಕಾರಣಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ತತ್ವ ಸಿದ್ದಾಂತಗಳನ್ನು ಬಲಿಕೊಡುತ್ತಿರುವುದು ಸುಳ್ಳೇನಲ್ಲ.
ಮತದಾರರು ಕೂಡ ಇಂತಹವರಿಗೆ ಮಣೆ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯ ಪ್ರತೀಕ. ಇಂದು ಹಲವಾರು ರಾಜಕಾರಣಿಗಳು ಪಕ್ಷದಲ್ಲಿದ್ದುಕೊಂಡೇ ಪಕ್ಷವಿರೋಧಿ ಚಟುವಟಿಕೆ ಹಾಗೂ ಬೆದರಿಕೆಗಳನ್ನು ಹಾಕುತ್ತಿದ್ದರೂ ಕೂಡ ಪಕ್ಷಗಳಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿಲ್ಲ.
ಇದರಿಂದಾಗಿ ಪಕ್ಷವಿರೋಧಿಗಳು ಹೆಚ್ಚುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಶಿಸ್ತು, ತತ್ವಗಳು ಹಾಗು ಸಿದ್ದಾಂತಗಳು ಅಧಃಪತನಗೊಂಡು ಅಸಂವಿಧಾನಿಕ ಪದಗಳ ಬಳಕೆ ಹೆಚ್ಚುತ್ತಿದೆ.
ಕೆಲವು ರಾಜಕಾರಣಿಗಳು ಸದಾ ಸುದ್ದಿಯಲ್ಲಿರಬೇಕು ಎಂಬ ಹುಂಬತನಕ್ಕೆ ಪ್ರಚೋದನಾಕಾರಿ ಮಾತುಗಳನ್ನಾಡುವ ಮೂಲಕ ಭಾವನಾತ್ಮಕ ವಾದ ಸಂಚಲನವನ್ನು ಉಂಟು ಮಾಡುವುದು ಕೆಲವರ ಕೃಷಿಯಾಗಿ ಬಿಟ್ಟಿದೆ. ಆದರೆ ತಾವಾಡುವ ಮಾತುಗಳಿಂದಾಗಿ ಅದು ಮತದಾರರ ಮನಸ್ಥಿತಿಯನ್ನು ‘ಕೃಷ'ಗೊಳಿಸುವ ಪರಿ ಇದಾಗಿದೆ. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು ಸಮಾಜದ ಸುಧಾರಣೆಗಾಗಿ ಆರೋಗ್ಯಯುತ ಟೀಕೆಗಳನ್ನು ಮಾಡಬೇಕಿರುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ.
ಹಣಗಳಿಕೆಗಾಗಿ ಅಥವಾ ಎದುರಾಳಿಗಳ ಮುಖಕ್ಕೆ ಮಸಿ ಬಳಿಯುವಂತಹ ಕಾರಣಕ್ಕಾಗಿ ಇಂತಹ ರಾಜಕಾರಣ ಮಾಡಬಾರದು. - ಕೆ.ಎಸ್. ಮೂರ್ತಿ