ಕಾಂಗ್ರೆಸ್ ನೀತಿ ‘ಭ್ರಷ್ಟಾಚಾರ ಮೊದಲು-ನಮ್ಮ ನೀತಿ ‘ನಾಗರಿಕರು ಮೊದಲು': ಮೋದಿ

ಅಂಕೋಲ (ಉತ್ತರ ಕನ್ನಡ), ಮೇ ೩: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕರ್ನಾಟಕ ರಾಜ್ಯದಲ್ಲಿ ವಿದೇಶದಿಂದ ೩೦ ಸಾವಿರ ಕೋಟಿ ಹೂಡಿಕೆ ಆಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಅದು ಮೂರು ಪಟ್ಟು ಅಂದರೆ ೯೦ ಸಾವಿರ ಕೊಟಿ ರೂಪಾಯಿಗೆ ಹೆಚ್ಚಾಯಿತು. ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ರಾಜ್ಯದ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಬುಧವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ಮುಂದುವರಿಸಿದ ಅವರು, ೨೦೧೮ರ ಚುನಾವಣೆ ನಂತರ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಬರೀ ಮೂರೂವರೆ ವರ್ಷದ ಆಡಳಿತ ಸಿಕ್ಕಿದೆ. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕೊಳೆ ತೊಳೆಯುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಕಾಂಗ್ರೆಸ್ ಸರ್ಕಾರ ೪ ಕೋಟಿ ೨೦ ಲಕ್ಷ ನಕಲಿ ಹೆಸರಿನ ವ್ಯಕ್ತಿಗಳಿಗೆ ರೇಷನ್ ನೀಡಿತ್ತು. ನಕಲಿ ಹೆಸರಿನಲ್ಲಿ ಸ್ಕಾಲರ್‌ಷಿಪ್ ಕೊಡುತ್ತಿದ್ದರು. ಈ ಎಲ್ಲ ಹಣ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತಿತ್ತು. ನಕಲಿ ಫಲಾನುಭವಿಗಳ ಸಂಖ್ಯೆ ಕಾಂಗ್ರೆಸ್ ಆಡಳಿತ ಸಮಯದಲ್ಲಿ ಕರ್ನಾಟಕ ಜನಸಂಖ್ಯೆಗಿAತ ಹೆಚ್ಚಾಗಿ ಹೋಗಿತ್ತು. ಭ್ರಷ್ಟಾಚಾರದ ಹಣ ಕಾಂಗ್ರೆಸ್‌ನ ಮೊದಲ ಕುಟುಂಬಕ್ಕೆ ಸಹ ಹೋಗುತ್ತಿತ್ತು ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಕುಟುಂಬದ ಮೇಲೆ ಪ್ರಧಾನಿ ಮೋದಿ ಕುಟುಕಿದರು. ಬಿಜೆಪಿಯ ನೀತಿ ಮೊದಲು ನಾಗರಿಕರು ಆದರೆ, ಕಾಂಗ್ರೆಸ್‌ನ ನೀತಿ ಮೊದಲು ಭ್ರಷ್ಟಾಚಾರ ಆಗಿದೆ ಎಂದರು.

ಪ್ರಿಯಾAಕ್ ಖರ್ಗೆಗೆ ಚುನಾವಣಾ ಆಯೋಗದ ನೋಟೀಸ್

ಬೆಂಗಳೂರು, ಮೇ ೩: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ನಾಲಾಯಕ್’ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಬುಧವಾರ ನೋಟೀಸ್ ಜಾರಿ ಮಾಡಿದೆ. ಪ್ರಿಯಾಂಕ್ ಖರ್ಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ನೋಟಿಸ್ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸೂಕ್ತ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂಬ ನೋಟೀಸ್‌ಗೆ ತಾ. ೪ ರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಪ್ರಿಯಾಂಕ್ ಖರ್ಗೆ ಅವರನ್ನು ಕೇಳಿದೆ. ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಮಾತು ಬಳಸಿರುವ ಪ್ರಿಯಾಂಕ್ ಖರ್ಗೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಪೊಲೀಸರು ತನಿಖೆ ಮಾಡುತ್ತಿಲ್ಲ: ‘ಸುಪ್ರೀಂ'ಗೆ ಕುಸ್ತಿಪಟುಗಳ ಹೇಳಿಕೆ

ನವದೆಹಲಿ, ಮೇ ೩: ಜಂತರ್ ಮಂತರ್‌ನಲ್ಲಿ ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ತನಿಖೆಗೆ ದೆಹಲಿ ಪೊಲೀಸರು ‘ಸಂಪೂರ್ಣವಾಗಿ ಏನೂ ಮಾಡುತ್ತಿಲ್ಲ' ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ಕುಸ್ತಿಪಟುಗಳ ಪರ ವಕೀಲರಾದ ನರೇಂದ್ರ ಹೂಡಾ ಅವರು ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಪೀಠಕ್ಕೆ ತಿಳಿಸಿದ್ದಾರೆ. ದೆಹಲಿ ಪೊಲೀಸರು ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ ಕೆಲವೇ ಗಂಟೆಗಳ ನಂತರ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಮೊದಲ ಎಫ್‌ಐಆರ್ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದರೆ, ಎರಡನೆಯದು ಮಹಿಳಾ ಕುಸ್ತಿಪಟುಗಳ ದೂರುಗಳನ್ನು ಆಧರಿಸಿ ದಾಖಲಿಸಲಾಗಿದೆ.

ಕರ್ನಾಟಕ ಸೇರಿ ಹಲವೆಡೆ ಮಳೆ: ಹವಾಮಾನ ಇಲಾಖೆ

ನವದೆಹಲಿ, ಮೇ ೩: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ತಾ. ೬ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ, ಅಂದರೆ ತಾ. ೬ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ತಾ. ೭ ರವರೆಗೆ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಅಮೇರಿಕದ ಹವಾಮಾನ ಮುನ್ಸೂಚನೆ ಘಟಕವಾದ ಗ್ಲೋಬಲ್ ಫೋರ್‌ಕಾಸ್ಟ್ ಸಿಸ್ಟಮ್ ಮತ್ತು ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ರಚನೆ ಕುರಿತ ವರದಿ ಬೆನ್ನಲ್ಲೇ ಐಎಂಡಿ ಈ ಎಚ್ಚರಿಕೆ ನೀಡಿದೆ.

ಗುಂಡಿಕ್ಕಿ ೮ ಮಕ್ಕಳು, ಭದ್ರತಾ ಸಿಬ್ಬಂದಿ ಹತ್ಯೆ: ವಿದ್ಯಾರ್ಥಿ ಬಂಧನ

ಬೆಲ್‌ಗ್ರೇಡ್, ಮೇ ೩: ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಬುಧವಾರ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೮ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ದಾಳಿ ನಡೆಸಿದ ಶಂಕಿತ ಹದಿಹರೆಯದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಬಾಲ್ಕನ್ ರಾಷ್ಟçವನ್ನು ಬೆಚ್ಚಿಬೀಳಿಸಿದೆ. ಬೆಲ್‌ಗ್ರೇಡ್‌ನ ಡೌನ್‌ಟೌನ್ ವ್ರಾಕಾರ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೮.೪೦ಕ್ಕೆ ಗುಂಡಿನ ದಾಳಿ ಸಂಭವಿಸಿದ್ದು, ಘಟನೆಯಲ್ಲಿ ೮ ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರು ಮಕ್ಕಳು ಮತ್ತು ಒಬ್ಬ ಶಾಲಾ ಶಿಕ್ಷಕ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ದುರಂತಕ್ಕೆ ಕಾರಣವಾದ ಎಲ್ಲಾ ಸಂಗತಿ ತಿಳಿಯುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಿವೆ. ಶಾಲೆಯ ಭದ್ರತಾ ಸಿಬ್ಬಂದಿ ಶೂಟರ್‌ನ ಮುಂದೆ ನಿಲ್ಲುವ ಮೂಲಕ ಹೆಚ್ಚಿನ ಸಾವುಗಳನ್ನು ತಡೆಗಟ್ಟಿರುವ ಸಾಧ್ಯತೆಯಿದೆ ಎಂದು ಗುಂಡಿನ ದಾಳಿ ನಡೆದಿದ್ದ ಬೆಲ್‌ಗ್ರೇಡ್‌ನ ವ್ರಾಕಾರ್ ಜಿಲ್ಲೆಯ ಅಧ್ಯಕ್ಷ ಮಿಲನ್ ನೆಡೆಲ್ಜ್ಕೋವಿಕ್ ತಿಳಿಸಿದ್ದಾರೆ.

‘ಅಂಬಾರಿ ಉತ್ಸವ' ಬಸ್ ಸೇವೆಯಿಂದ ಕೆಎಸ್‌ಆರ್‌ಟಿಸಿಗೆ ರೂ. ೩ ಕೋಟಿಗೂ ಹೆಚ್ಚು ಆದಾಯ

ಬೆಂಗಳೂರು, ಮೇ ೩: ಅಂಬಾರಿ ಉತ್ಸವ ಬಸ್ ಸೇವೆಯಿಂದ ಕೆಎಸ್‌ಆರ್‌ಟಿಸಿಗೆ ರೂ. ೩ ಕೋಟಿಗೂ ಹೆಚ್ಚು ಆದಾಯ ಹರಿದು ಬಂದಿದೆ. ಅಂಬಾರಿ ಉತ್ಸವ ಬಸ್ ಯುರೋಪಿಯನ್ ಮಾದರಿ ಎಸಿ-ಸ್ಲೀಪರ್ ಬಸ್ ಆಗಿದ್ದು, ಈ ಬಸ್ ಸೇವೆಯಿಂದ ಸಾರಿಗೆ ನಿಗಮಕ್ಕೆ ರೂ. ೩ ಕೋಟಿಗೂ ಹೆಚ್ಚು ಆದಾಯ ಹರಿದು ಬಂದಿದೆ. ಈ ಬಸ್‌ಗಳು ಮುರುಡೇಶ್ವರ, ಕುಂದಾಪುರ, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರ, ತ್ರಿಶೂರ್, ಪಣಜಿ, ಕುಂದಾಪುರ, ಎರ್ನಾಕುಲಂ ಮತ್ತು ಪುಣೆಯಂತಹ ದೀರ್ಘ ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಪ್ರತಿ ಕಿಲೋಮೀಟರ್‌ಗೆ ಅಂದಾಜು ರೂ. ೭೬ ಗಳಿಸುತ್ತಿದೆ. ಈ ಬಸ್‌ಗೆ ಸಾರ್ವಜನಿಕರಿಂದ ಅಗಾಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಈ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಯಶಸ್ವಿಯಾಗಿ ಸಂಚರಿಸುತ್ತಿದೆ. ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಅಂಬಾರಿ ಬಸ್‌ಗಳು ನೀಡುವ ಉನ್ನತ ದರ್ಜೆಯ ಸೇವೆಯಿಂದ ತೃಪ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮುಂಬರುವ ತಿಂಗಳಿನಲ್ಲಿ ಇನ್ನೂ ೩೦ ಬಸ್‌ಗಳನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದ್ದಾರೆ.