ಸೋಮವಾರಪೇಟೆ, ಮೇ ೨: ಗರಗಂದೂರು-ಹೊಸತೋಟ ನಡುವಿನ ಹಾರಂಗಿ ಹಿನ್ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಹೊಸತೋಟ ಕಾಲೋನಿ ನಿವಾಸಿ ಜೇನುಕುರುಬರ ಲಿಂಗ ಅವರ ಪುತ್ರ ಶಾಂತು (೪೫) ಎಂಬವರೇ ಸಾವನ್ನಪ್ಪಿದವರು. ನಿನ್ನೆ ದಿನ ಅಪರಾಹ್ನ ೩ ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ.

ನಿನ್ನೆ ದಿನ ಹಾರಂಗಿ ಹಿನ್ನೀರಿಗೆ ಇತರ ಸ್ನೇಹಿತರೊಂದಿಗೆ ತೆರಳಿರುವ ಶಾಂತು, ಮದ್ಯಪಾನ ಮಾಡಿದ್ದು, ಮಧ್ಯಾಹ್ನ ೩ ಗಂಟೆ ಸುಮಾರಿಗೆ ನೀರಿಗೆ ಹಾರಿ ಕಣ್ಮರೆಯಾಗಿದ್ದಾರೆ. ನಂತರ ಅಗ್ನಿ ಶಾಮಕ ಸಿಬ್ಬಂದಿಗಳು ತೆರಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಲಿಲ್ಲ.

ಇಂದು ಬೆಳಿಗ್ಗೆ ಹಿನ್ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ಸಂಬAಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತ ಶಾಂತು ಅವರು ಕಳೆದ ಅನೇಕ ವರ್ಷಗಳಿಂದ ಒಬ್ಬಂಟಿಯಾಗಿ ವಾಸವಿದ್ದರು ಎಂದು ತಿಳಿದು ಬಂದಿದೆ.

ಹಾರAಗಿ ಹಿನ್ನೀರು ಪ್ರದೇಶ ವ್ಯಾಪ್ತಿಯು ಮದ್ಯಪಾನ ಮಾಡುವವರು, ಗಾಂಜಾ ಸೇವಿಸುವವರ ಅಡ್ಡೆಯಾಗಿದ್ದು, ದಿನಂಪ್ರತಿ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇವೆ. ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.