ಮಡಿಕೇರಿ, ಮೇ ೨ : ನಿವೇಶನದ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ನಿವಾಸಿಗಳು ಕಳೆದ ೩೬ ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಅಂತ್ಯಗೊAಡಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡಿರುವ ಹಿನ್ನೆಲೆ ಧರಣಿಯಿಂದ ಹಿಂದೆ ಸರಿದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರ ಸಲಹೆಯಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ರಾ.ಪಂ ಅಧ್ಯಕ್ಷರಾದ ಕುಸುಮಾವತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮೊಣ್ಣಪ್ಪ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರೊಂದಿಗೆ ಸಮಾಲೋಚಿಸಿದರು.

ಚುನಾವಣೆ ಬಳಿಕ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಚುನಾವಣಾ ಬಹಿಷ್ಕಾರದ ನಿರ್ಧಾರ ಕೈಬಿಡುವಂತೆ ಮನವೊಲಿಸಿದರು.