ಮಡಿಕೇರಿ, ಮೇ ೨: ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಏತನ್ಮಧ್ಯೆ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿರುವ ಅಲ್ಪಸಂಖ್ಯಾತರನ್ನು ಸೆಳೆಯಲು ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿವೆ.
ವೀರಾಜಪೇಟೆ ಕ್ಷೇತ್ರದಲ್ಲಿ ೪೮ ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರು ಇದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೩೫ ಸಾವಿರ ಅಲ್ಪಸಂಖ್ಯಾತ ಮತದಾರರು ಇದ್ದಾರೆ.
ವೀರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದರು. ಆದರೆ ಇದೀಗ ಇದೇ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷ ವೀರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್ ಪಕ್ಷ ವೀರಾಜಪೇಟೆ ಕ್ಷೇತ್ರದಲ್ಲಿ ಸಂಘಟನೆಗೊಳ್ಳಲಿಲ್ಲ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಂಕೇತ್ ಪೂವಯ್ಯ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಜೆಡಿಎಸ್ ಪಕ್ಷದಿಂದ ಮನ್ಸೂರ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ಸುಲಭವಾಗಿ ಅಲ್ಪಸಂಖ್ಯಾತ ಮತಗಳನ್ನು ಪಡೆಯಬಹುದೆಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಂ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ಪಡೆಯುವ ಮತಗಳು ನೇರ ಹೊಡೆತ ಬೀಳುವ ಸಾಧ್ಯತೆ ಇದೆ.
ವೀರಾಜಪೇಟೆ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಈ ಬಾರಿಯ ಚುನಾವಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ವೀರಾಜಪೇಟೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಚಾರಕ್ಕೆ ಸದ್ದಿಲ್ಲದೆ ಧುಮುಕಿದ್ದಾರೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಮನ್ಸೂರ್ ಅಲಿ ಮತಪಡೆಯುತ್ತಾರೆ ಎಂಬ ಮಾತುಗಳು ವೀರಾಜಪೇಟೆ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಕಳೆದ ಎರಡು ಚುನಾವಣೆಗಳಲ್ಲಿ ವೀರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತ ಮುಸ್ಲಿಂ ಮತದಾರರು ಇರುವ ಬೂತ್ಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ ಬೋಪಯ್ಯ ಅವರು ಮುನ್ನಡೆ ಸಾಧಿಸಿದ್ದು, ವಿಶೇಷವಾಗಿತ್ತು. ವೀರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಲ್ಲಿ ಬಿಜೆಪಿ ಬೆಂಬಲಿಸುವ ಮತದಾರರು ಕೂಡ ಇದ್ದಾರೆ ಎಂಬುದು ಕಳೆದೆರಡು ಚುನಾವಣೆಯಲ್ಲಿ ಸಾಬೀತಾಗಿತ್ತು.
ಮಡಿಕೇರಿಯಲ್ಲಿ ಗೊಂದಲ!
ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂಬ ಗೊಂದಲದಲ್ಲಿ ಇದ್ದಾರೆ. ದಿನದಿಂದ ದಿನಕ್ಕೆ ಮಡಿಕೇರಿ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ.
ತ್ರಿಕೋನ ಸ್ಪರ್ಧೆಯಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆಯ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಬಹುತೇಕ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಕಾರಣದಿಂದ ಜೆಡಿಎಸ್ ಅಭ್ಯರ್ಥಿ ಬಿ.ಎ ಜೀವಿಜಯ ಅವರು ಸೋಲು ಕಂಡಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಮಡಿಕೇರಿ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದೇ ಕುತೂಹಲ.
ಇದೇ ಮೊದಲ ಬಾರಿಗೆ ಎಸ್.ಡಿ.ಪಿ.ಐ ಅಭ್ಯರ್ಥಿ ಅಮೀನ್ ಮೊಹಸ್ಸೀನ್ ಸ್ಪರ್ಧಿಸುತ್ತಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿದೆ.
ಎಸ್.ಡಿ.ಪಿ.ಐ ಅಭ್ಯರ್ಥಿ ಪಡೆಯುವ ಮತಗಳು ಕೂಡ ಬಿಜೆಪಿ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಇದೆ.
ಅದಲ್ಲದೇ ಜಿಲ್ಲೆಯ ಧಾರ್ಮಿಕ ಸಂಘಟನೆಗಳು ಮುಖಂಡರುಗಳು ಮತವಿಭಜನೆಯಾಗದಂತೆ, ಜಾತ್ಯತೀತ ಗೆಲ್ಲುವ ಅಭ್ಯರ್ಥಿಗಳಿಗೆ ಮತಚಲಾಯಿಸಲು ಕರೆ ನೀಡಿದ್ದಾರೆ.
ಆದರೆ ಧಾರ್ಮಿಕ ಮುಖಂಡರುಗಳ ಕರೆಗೆ ಅಷ್ಟರಮಟ್ಟಿಗೆ ಇದುವರೆಗೆ ಯಾವ ಚುನಾವಣೆಯಲ್ಲಿ ಕೂಡ ಫಲ ಸಿಕ್ಕರಲಿಲ್ಲ. ಆದರೆ ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜಿಲ್ಲೆಯ ಧಾರ್ಮಿಕ ಸಂಘಟನೆಯ ಪ್ರಮುಖ ನಾಯಕರೊಬ್ಬರು ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪನವರಿಗೆ ಬೆಂಬಲ ನೀಡಲು ತಿಳಿಸಿದ್ದಾರೆ ಎಂಬ ಖಚಿತ ಮಾಹಿತಿ ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಮತ ಸಮರಕ್ಕೆ ೧೦ ದಿನ ಬಾಕಿ
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಕ್ಷಿಪ್ರಗೊಳ್ಳುತ್ತಿವೆ. ಇದೀಗ ಮತ ಸಮರಕ್ಕೆ ಕೇವಲ ೧೦ ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗತೊಡಗಿದೆ. ಮೇ ೧೦ರಂದು ಚುನಾವಣೆ ನಡೆಯಲಿದ್ದು, ಪಕ್ಷ ಪಕ್ಷಗಳ ನಡುವೆ ಹಾಗೂ ಅಭ್ಯರ್ಥಿಗಳ ಪರವಾದ ಪ್ರಚಾರ ಬಿರುಸುಗೊಳ್ಳುತ್ತಿದೆ. ಈ ಹಿಂದಿನ ಚುನಾವಣೆಗಳಿಗಿಂತಲೂ ಈ ಬಾರಿಯ ಅಖಾಡ ಕುತೂಹಲ ಹೆಚ್ಚಿಸಿದ್ದು, ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಈ ಬಾರಿಯ ಮತದಾನದಲ್ಲೂ ಹೆಚ್ಚಳವಾಗುವ ಸಾಧ್ಯತೆಯಿದೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆ