ಮಡಿಕೇರಿ, ಮೇ ೨: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ದಿನಗಳು ಉರುಳಿದಂತೆ ಸುಡು ಬಿಸಿಲು ತಾಪ ಏರತೊಡಗಿದೆ. ಪರಿಣಾಮ ಈ ಜಿಲ್ಲೆಯಲ್ಲಿ ಅನೇಕ ನದಿ ಮೂಲಗಳು ಬತ್ತುವಂತಾಗಿದೆ. ಎಲ್ಲೆಡೆ ರಾಜಕೀಯದಲ್ಲಿ ಚುನಾವಣಾ ಕಾವು ನಡುವೆ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದೀಗ ಸಣ್ಣ ಮಳೆಯಾದರೂ ಈತನಕದ ಬಿಸಿಲ ಬೇಗೆಯಿಂದ ಸಮಸ್ಯೆಗಳು ಉದ್ಭವವಾಗಿದೆ.
ಜಿಲ್ಲೆಯ ನಗರ ಪಟ್ಟಣದ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಡೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಂಕಟ ಗೋಚರಿಸ ತೊಡಗಿದೆ. ಕೆಲವು ಕಡೆ ಮಾತ್ರ ಎರಡು ದಿನಗಳಿಗೆ ಒಮ್ಮೆ ಕೆಲಹೊತ್ತು ಅಲ್ಪ ಪ್ರಮಾಣದ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ.
ನೈಸರ್ಗಿಕ ಮೂಲದಿಂದ ಗ್ರಾಮಾಂತರ ಪ್ರದೇಶದಲ್ಲಿ ಸರಬರಾಜು ಮಾಡುವ ಯೋಜನೆ ಬಹುತೇಕ ಜಲಮೂಲಕ್ಕೂ ಸಂಚಕಾರ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಎದುರಾಗಿದೆ.
ಇದಕ್ಕೆ ಕೊಡಗು ಜಿಲ್ಲೆಯ ಏಕೈಕ ಹಾರಂಗಿ ಜಲಾಶಯದ ನೀರಿನ ಮಟ್ಟ ಕೈಗನ್ನಡಿಯಂತಿದೆ. ಈ ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ಅವಧಿಯಲ್ಲಿ ೨೮೪೭ ಅಡಿಗಳಷ್ಟು ಇತ್ತು. ಆದರೆ ಈಗ ಈ ಜಲಾಶಯದ ನೀರಿನ ಮಟ್ಟ ಕೇವಲ ೨೮೨೦ ಅಡಿಗಳಷ್ಟು ಮಾತ್ರ ಗೋಚರಿಸುತ್ತದೆ. ಅಲ್ಲದೆ ೨೭ ಅಡಿಗಳಷ್ಟು ಕೆಳ ಹಂತದಲ್ಲಿ ಕುಸಿದು ಹೋಗಿದೆ. ಕಾರಣ ಈ ಜಲಾಶಯಕ್ಕೆ ಹರಿದು ಬರುವ ಉತ್ತರ ಕೊಡಗಿನ ಗ್ರಾಮೀಣ ಭಾಗದ ಹಟ್ಟಿಹೊಳೆ ಹಾಗೂ ಮಾದಾಪುರ ಹೊಳೆಯ ನೀರಿನ ಮೂಲಗಳು ಬಹುತೇಕ ಬತ್ತಿಹೋಗಿವೆ.
ಈ ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವದು ವಾಡಿಕೆ ಆಗಿತ್ತು.
ಆದರೆ ಪ್ರಸ್ತುತ ಹಿರಿಯ ಅನುಭವಿ ಮಂದಿ ಹೇಳುವ ಪ್ರಕಾರ ಸುಮಾರು ಮೂವತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಈ ರೀತಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬರಗಾಲದ ಪರಿಸ್ಥಿತಿ ಎದುರಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಉಂಟಾಗಿತ್ತು. ಕೆಲವು ಕಡೆಗಳಲ್ಲಿ ಬೆಳೆಯುವ ಬೇಸಿಗೆ ಬೆಳೆಗೆ ನೀರು ಸರಬರಾಜು ಸಾಧ್ಯ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇನ್ನು ತರಕಾರಿ ಸೊಪ್ಪು ಇತ್ಯಾದಿಗಳನ್ನು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂದಿ ಬಿಸಿಲಿನ ಹೊಡೆತಕ್ಕೆ ಸಿಲುಕಿ ಮುಗಿಲಿನ ಕಡೆಗೆ ವರುಣ ದೇವನ ಕರುಣೆಗಾಗಿ ನೋಟ ಹರಿಸುತ್ತಿದ್ದಾರೆ. ಇನ್ನು ಕೊಡಗು ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆ ಕಾಫಿ ಹಾಗೂ ಕರಿ ಮೆಣಸು ಗಿಡ ಬಳ್ಳಿ ಒಣಗಿ ಎಲೆಗಳು ಒಣಗಿ ಉದುರಿ ಬಿದ್ದ ಸನ್ನಿವೇಶ ಸೃಷ್ಟಿಯಾಗಿದೆ. ಪ್ರಸ್ತುತ ವಾತಾವರಣದಲ್ಲಿ ಬದಲಾವಣೆ ಕಂಡುಬರುತ್ತಿರುವುದು ಒಂದಷ್ಟು ಆಶಾಭಾವನೆ ಮೂಡಿಸಿದೆ. ಆದರೂ ಇನ್ನೂ ಬೇಸಿಗೆ ಅವಧಿ ಇರುವುದು ಚಿಂತೆಗೆ ಕಾರಣವಾಗಿದೆ.
-ಚಿ.ನಾ. ಸೋಮೇಶ್