ಗೋಣಿಕೊಪ್ಪಲು, ಮೇ ೨ : ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಹಲವು ಯೋಜನೆಗಳ ಫಲವು ಪ್ರತಿ ನಾಗರಿಕನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬರುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.

ಬಾಳೆಲೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ಈ ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಗೊಳಿಸುವ ಪ್ರಯತ್ನದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಕೆಲಸ ನಿರ್ವಹಿಸುತ್ತಿದೆ; ಬಡ ಜನರ ಏಳಿಗೆಗಾಗಿ ದುಡಿಯುತ್ತಿದೆ. ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆ ಕೇಂದ್ರ ಸರ್ಕಾರದಿಂದ ಜಾರಿಯಾಗಿದೆ. ಬಡವರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್ ಬಾಳೆಲೆ ಹೋಬಳಿಯ ಹಲವು ಪಂಚಾಯಿತಿಗಳಿಗೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯನವರು ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಿದ್ದಾರೆ. ಇದರಿಂದ ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಸಾಧಿಸಲಾಗಿದೆ. ಮುಂದೆಯೂ ಈ ಕ್ಷೇತ್ರದಲ್ಲಿ ಕೆ.ಜಿ.ಬೋಪಯ್ಯನವರು ಹೆಚ್ಚಿನ ಮತಗಳಿಂದ ಜಯಶೀಲರಾಗಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸಿದರು.

ಅಂಕಣಕಾರ ಸಂತೋಷ್ ತಮ್ಮಯ್ಯ ಮಾತನಾಡಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯನವರು ಕೊಡವರ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಒದಗಿಸಿದ್ದಾರೆ. ಹಾಕಿ ಉತ್ಸವಕ್ಕೆ ಅನುದಾನವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಹಲವು ಮಂದಿ ಇವರನ್ನು ಕೊಡವ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದರು. ವೇದಿಕೆಯಲ್ಲಿ ಬಿಜೆಪಿ ಪಕ್ಷದ ಬಾಳೆಲೆ ಹೋಬಳಿಯ ಉಸ್ತುವಾರಿ ಗುಮ್ಮಟ್ಟಿರ ಕಿಲನ್ ಗಣಪತಿ ಕೆ.ಜಿ. ಬೋಪಯ್ಯನವರ ಪತ್ನಿ ಕುಂತಿ ಬೋಪಯ್ಯ, ಕಾರ್ಯದರ್ಶಿ ವಾಟೇರಿರ ಬೋಪಣ್ಣ, ವಿವಿಧ ಭಾಗದ ಶಕ್ತಿ ಕೇಂದ್ರದ ಪ್ರಮುಖರಾದ ಆದೇಂಗಡ ವಿನು ಚಂಗಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ಸುಕೇಶ್, ಬಿಜೆಪಿ ಎಸ್‌ಸಿ ಮೋರ್ಚಾದ ಕಾರ್ಯದರ್ಶಿ ಪರಮಾನಂದ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳಾದ ಅಳಮೇಂಗಡ ಬೋಸ್, ರಂಜನ್ ಚಂಗಪ್ಪ, ಕಾಡ್ಯಮಾಡ ಉತ್ತಪ್ಪ, ಯಮುನ ಚಂಗಪ್ಪ, ಸುಜಾ ಪೂಣಚ್ಚ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸ್ಥಳೀಯ ಗಣಪತಿ ದೇವಾಲಯದಿಂದ ನಗರದ ಬಸ್ ನಿಲ್ದಾಣದವರೆಗೂ ಕಾರ್ಯಕರ್ತರು ಜಯಘೋಷ ಮೊಳಗಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ಬಾಳೆಲೆ ಶಕ್ತಿ ಕೇಂದ್ರದ ಪ್ರಮುಖ್ ಸುಕೇಶ್ ಸ್ವಾಗತಿಸಿ, ವಂದಿಸಿದರು.

-ಹೆಚ್.ಕೆ.ಜಗದೀಶ್