ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ: ಭಜರಂಗದಳ, ಪಿಎಫ್‌ಐ ವಿರುದ್ಧ ಕ್ರಮದ ಭರವಸೆ
ಬೆಂಗಳೂರು, ಮೇ ೨: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಅನ್ಯಾಯದ ಕಾನೂನುಗಳು ಮತ್ತು ಜನವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಮಂಗಳವಾರ ತನ್ನ ಮೇ ೧೦ ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ವಿರುದ್ಧ ದ್ವೇಷ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ. ಭಜರಂಗದಳ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇತರ ಸಂಘಟನೆಗಳನ್ನು ನಿಷೇಧಿಸುವುದು ಸೇರಿದಂತೆ ಕಾನೂನಿನ ಪ್ರಕಾರ "ನಿರ್ಣಾಯಕ ಕ್ರಮ" ತೆಗೆದುಕೊಳ್ಳುತ್ತದೆ ಎಂದು ಪಕ್ಷ ಹೇಳಿದೆ. ಅಂತಹ ಯಾವುದೇ ಸಂಘಟನೆಗಳ ಮೇಲೆ ನಿಷೇಧ ಹೇರುವುದು ಸೇರಿದಂತೆ ಕಾನೂನು ಪ್ರಕಾರ ನಾವು ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿ ತಿಳಿಸಿದರು.
ಭಜರಂಗದಳದೊAದಿಗೆ ಹನುಮಂತನ ಹೋಲಿಕೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಮೇ ೨: ಪ್ರಧಾನಿ ನರೇಂದ್ರ ಮೋದಿ ಭಜರಂಗದಳದೊAದಿಗೆ ಹನುಮಂತನನ್ನು ಹೋಲಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಹೀಗೆ ಪ್ರಧಾನಿ ಹೋಲಿಕೆ ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಕೋಟ್ಯಂತರ ಹನುಮಂತನ ಭಕ್ತರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕಿಡಿಕಾರಿದ್ದಾರೆ. ಪ್ರಧಾನ ಮಂತ್ರಿ ಭಗವಾನ್ ಹನುಮಂತನ ಮೇಲಿನ ನಮ್ಮ ನಂಬಿಕೆಯನ್ನು ಅವಮಾನಿಸುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಅವರು ದೇಶದ ಕ್ಷಮೆಯಾಚಿಸಬೇಕು. ಭಜರಂಗ ಬಲಿಯನ್ನು ಅವಮಾನಿಸುವ ಹಕ್ಕನ್ನು ಯಾರೂ ಪ್ರಧಾನಿಗೆ ನೀಡಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೂ ಮುನ್ನಾ ವಿಜಯನಗರದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಇದು ಹನುಮಂತನನ್ನು ಪೂಜಿಸುವವರನ್ನು ಬಂಧಿಸುವ ಕಾಂಗ್ರೆಸ್ ಪ್ರಯತ್ನವಾಗಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಈ ಹಿಂದೆ ಭಗವಾನ್ ರಾಮನಿಗೆ ಬೀಗ ಹಾಕಿತ್ತು ಮತ್ತು ಈಗ ‘ಜೈ ಭಜರಂಗ್ ಬಲಿ' ಎಂದು ಕೂಗುವವರಿಗೆ ಬೀಗ ಹಾಕಲು ಬಯಸಿದೆ ಎಂದು ದೂರಿದರು.
ಗಲ್ಲಿಗೇರಿಸುವ ವಿಧಾನ ಪರಿಶೀಲಿಸಲು ಸಮಿತಿ ರಚನೆ: ಸುಪ್ರೀಂ ಕೋರ್ಟ್ಗೆ ಕೇಂದ್ರ
ನವದೆಹಲಿ, ಮೇ ೨: ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಚಾಲ್ತಿಯಲ್ಲಿರುವ ವಿಧಾನವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರ ಪೀಠವು ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಸಲ್ಲಿಸಿದ ವರದಿಯನ್ನು ಗಮನಿಸಿತು. ಸರ್ಕಾರವು ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಪರಿಗಣಿಸುತ್ತಿದೆ ಎಂದು ಕೇಂದ್ರ ಪರ ವಕೀಲರು ಹೇಳಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪದ್ರಿವಾಲಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ವಾದ ಮಂಡಿಸಿದ್ದರು. ಈ ಕುರಿತು ಸಮಿತಿ ರಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಸಮಿತಿಯಲ್ಲಿ ಯಾವ ಹೆಸರುಗಳನ್ನು ಸೇರಿಸಲಾಗುತ್ತದೆ ಎಂಬುದನ್ನು ಈಗ ಪರಿಗಣಿಸಲಾಗುತ್ತಿದೆ ಎಂದು ಎಜಿ ತಿಳಿಸಿದರು. ಅವರು ಸ್ವಲ್ಪ ಸಮಯದ ನಂತರ ಮಾತ್ರ ಉತ್ತರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಸುಪ್ರೀಂ ಕೋರ್ಟ್ ಪೀಠವೂ ಸಹಮತ ವ್ಯಕ್ತಪಡಿಸಿದ್ದು, ಸಮಿತಿ ರಚನೆ ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದು ಹೇಳಿದೆ.
ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ
ಬೆಂಗಳೂರು, ಮೇ ೨: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ. ಮುಳಬಾಗಿಲಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಶಿವಕುಮಾರ್ ಬೆಂಗಳೂರಿನಿAದ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಾರ್ಗ ಮಧ್ಯೆ ಹದ್ದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಹದ್ದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್‌ನ ಗಾಜು ಪುಡಿಪುಡಿಯಾಗಿದೆ. ಇದರಿಂದಾಗಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ. ಜಕ್ಕೂರು ಹೆಲಿಪ್ಯಾಡ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಪೈಲೆಟ್ ಹರಸಾಹಸದಿಂದ ಭಾರೀ ಅನಾಹುತ ತಪ್ಪಿದ್ದು ಕೂದಲೆಳೆ ಅಂತರದಲ್ಲಿ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಜೊತೆಗಿದ್ದ ಇತರ ಕೆಲವರಿಗೆ ಗಾಯಗಳಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರದ ಮುಳಬಾಗಿಲಿನಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ರಸ್ತೆ ಮಾರ್ಗದ ಮೂಲಕ ಕೋಲಾರಕ್ಕೆ ಪ್ರಯಾಣ ಬೆಳೆಸಿದರು.
ಕುಖ್ಯಾತ ಉಗ್ರ ಟಿಟಿಪಿ ಕಮಾಂಡರ್ ಅಬ್ದುಲ್ ಜಬರ್ ಷಾ ಹತ್ಯೆ
ಇಸ್ಲಾಮಾಬಾದ್, ಮೇ ೨: ಕುಖ್ಯಾತ ಭಯೋತ್ಪಾದಕ ಹಾಗೂ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕಮಾಂಡರ್ ಅಬ್ದುಲ್ ಜಬರ್ ಷಾನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಧಾರ್ಮಿಕ ಗುಂಪುಗಳು, ಪೋಲಿಯೋ ಲಸಿಕೆ ನೀಡುವ ತಂಡಗಳ ಮೇಲಿನ ದಾಳಿ ಸೇರಿದಂತೆ ಅನೇಕ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ಜಬರ್ ಷಾನನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಮಂಗಳವಾರ ಹತ್ಯೆ ಮಾಡಿವೆ. ಸೋಮವಾರ ಖೈಬರ್ ಪ್ರಾಂತ್ಯದ ದಕ್ಷಿಣ ವಜಿರಿಸ್ತಾನ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಗ್ರಾಮವೊಂದರಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ದಾಳಿ ಮಾಡಿ ಅಬ್ದುಲ್ ಜಬರ್ ಷಾನನ್ನು ಹತ್ಯೆ ಮಾಡಿವೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಲಾಗಿದ್ದು, ಈ ಘಟನೆಯಲ್ಲಿ ಅಬ್ದುಲ್ ಜಬರ್ ಷಾ ಹತ್ಯೆಯಾಗಿದ್ದರೆ, ಇನ್ನು ಇಬ್ಬರು ಭಯೋತ್ಪಾದಕರು ಗಾಯಗೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳ ಸತತ ಎರಡನೇ ಯಶಸ್ವಿ ಕಾರ್ಯಾಚರಣೆಯಾಗಿದೆ. ಕಾನೂನುಬಾಹಿರ ಟಿಟಿಪಿ ಸಂಘಟನೆ ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳನ್ನು ಹೆಚ್ಚಿಸಿದೆ ಮತ್ತು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಪ್ರಬಲವಾಗಿದೆ. ೨೦೦೭ ರಲ್ಲಿ ಹಲವಾರು ಉಗ್ರಗಾಮಿ ಸಂಘಟನೆಗಳ ಸಮೂಹ ಗುಂಪಿನAತೆ ಸ್ಥಾಪಿಸಲಾದ ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ಕದನ ವಿರಾಮವನ್ನು ರದ್ದುಗೊಳಿಸಿತು ಮತ್ತು ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸಲು ತನ್ನ ಉಗ್ರಗಾಮಿಗಳಿಗೆ ಆದೇಶ ನೀಡಿತ್ತು.