ಮಡಿಕೇರಿ, ಏ. ೨೯: ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್‌ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಗೆ ಇಂದು ಅಥ್ಲೆಟಿಕ್ ಕ್ರೀಡಾಕೂಟ ಏರ್ಪಡಿಸಲಾಯಿತು.
ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪುಟಾಣಿ ಗಳು, ಕಿರಿಯ, ಹಿರಿಯ ಹಾಗೂ ಮುಕ್ತ ವಿಭಾಗದಲ್ಲಿ ೧೦೦, ೨೦೦ಮೀ. ಓಟದ ಸ್ಪರ್ಧೆ ನಡೆಸಲಾಯಿತು. ಅಲ್ಲದೆ, ಹಿರಿಯ ಬಾಲಕಿಯರಿಗೆ ೮೦೦ಮೀ, ಬಾಲಕರಿಗೆ ೧೦೦೦ಮೀ ದೂರದ ಓಟದ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಯಿತು. ಮುಕ್ತ ವಿಭಾಗದಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರಿಗೂ ಭಾಗವಹಿಸಲು ಅವಕಾಶ ನೀಡಲಾಯಿತು. ೯೦ಕ್ಕೂ ಅಧಿಕ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಮೇ ೧ ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವದು. ವಾಂಡರರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ. ವೆಂಕಟೇಶ್, ಬೊಪ್ಪಂಡ ಶಾಂ ಪೂಣಚ್ಚ, ಕಿರುಂದAಡ ಗಣೇಶ್, ಕುಡೆಕಲ್ ಸಂತೋಷ್, ಹರೇಂದ್ರ, ಕಿರಣ್ ಅವರುಗಳು ಕ್ರೀಡಾಕೂಟ ನಡೆಸಿಕೊಟ್ಟರು.