ಸಿದ್ದಾಪುರ, ಏ. ೩೦: ಮೈದಾನವೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಕಾಫಿ ತೋಟದೊಳಗಿನಿಂದ ಕಾಡಾನೆಯೊಂದು ಮೈದಾನಕ್ಕೆ ಏಕಾಏಕಿ ನುಗ್ಗಿದ್ದು, ಮಕ್ಕಳು ಭಯದಿಂದ ಕಿರುಚುತ್ತಾ ಕಲ್ಲು ತೂರುವ ಮೂಲಕ ಕಾಡಾನೆಯನ್ನು ಹಿಮ್ಮೆಟ್ಟಿಸಿದ ಘಟನೆ ಶನಿವಾರ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರದ ಮೈಸೂರು ರಸ್ತೆಯ ಹೊಸಬಡಾವಣೆಯಲ್ಲಿ ಅಲ್ಲಿನ ನಿವಾಸಿಗಳ ಮಕ್ಕಳು ಮೈದಾನವೊಂದರಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭ ಸಮೀಪದ ತೋಟವೊಂದರಿAದ ಕಾಡಾನೆಯೊಂದು ದಿಢೀರನೆ ಬಂದಿದೆ. ಇದನ್ನು ಕಂಡ ಮಕ್ಕಳು ಭಯಗೊಂಡು ಕಲ್ಲು ಬೀಸಿದ್ದಾರೆ. ನಂತರ ಕಾಡಾನೆ ಹಿಂತಿರುಗಿ ಕಾಫಿ ತೋಟದತ್ತ ತೆರಳಿದೆ.
ಮೈಸೂರು ರಸ್ತೆಯಿಂದ ತೆರಳಿದ ಕಾಡಾನೆಯು ಸಿದ್ದಾಪುರದ ಕರಡಿಕಾಡ್ ಎಸ್ಟೇಟ್ನ ಮಾಲೀಕರ ಮನೆಗೆ ತೆರಳುವ ರಸ್ತೆಯ ಬದಿಯಲ್ಲಿ ಕಾಣಿಸಿಕೊಂಡಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು