ಶನಿವಾರಸAತೆ, ಏ. ೩೦: ಏಪ್ರಿಲ್ ೨೯ರ “ಶಕ್ತಿ’’ಯಲ್ಲಿ ಪ್ರಕಟವಾದ ‘ರಾಮನಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ತೀರ್ಮಾನ’ ಎಂಬ ವರದಿಗೆ ಸ್ಪಂದಿಸಿ ಶನಿವಾರಸಂತೆ ಹೋಬಳಿ ಕಂದಾಯ ಪರಿವೀಕ್ಷಕರು, ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗೌಡಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿಯವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ ಅವರು, ರಾಮನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿ ಆಗದಿರುವುದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ವಿಷಯದ ಬಗ್ಗೆ ವಿಚಾರಣೆ ನಡೆಸಿದರು.

ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿ ಮಾಡುವ ಕಡತಕ್ಕೆ ಈಗಾಗಲೇ ಕ್ರಮ ವಹಿಸಲಾಗಿದ್ದು ಅಂತಿಮ ಹಂತದಲ್ಲಿದೆ. ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಸಂಬAಧದ ಪ್ರಕರಣ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ಅಧಿಕಾರಿ ಲಿಖಿತಾ ತಿಳಿಸಿದರು.

ಕಂದಾಯ ಪರಿವೀಕ್ಷಕ ಸಂತೋಷ್ ಫೋನ್ ಮುಖಾಂತರ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಚರ್ಚಿಸಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.ಗ್ರಾಮಸ್ಥರು ಬಹಿಷ್ಕಾರಕ್ಕೆ ಕಾರಣವಾದ ಎರಡು ಪ್ರಕರಣಗಳನ್ನು ಅತಿ ಶೀಘ್ರ ನೆರವೇರಿಸಿಕೊಡುವಂತೆ ಆಗ್ರಹಿಸಿ, ಗ್ರಾಮದಲ್ಲಿ ನೇತು ಹಾಕಿದ್ದ “ಮತದಾನ ಬಹಿಷ್ಕಾರ’’ ಎಂಬ ಫಲಕವನ್ನು ತೆರವುಗೊಳಿಸಿ, ಬಹಿಷ್ಕಾರ ಹಿಂಪಡೆದರು.

ಅಧಿಕಾರಿಗಳು ಮಹಜರು ಮಾಡಿದ ಠರಾವನ್ನು ಓದಿ, ಒಪ್ಪಿಕೊಂಡ ಗ್ರಾಮಾಧ್ಯಕ್ಷ ರಮೇಶ್, ಗ್ರಾಮಸ್ಥರಾದ ಪ್ರವೀಣ್ ಕುಮಾರ್, ರಕ್ಷಿತ್, ಹರೀಶ್, ಸುಬ್ಬಣ್ಣ, ರಾಜಣ್ಣ, ಸುಮಾ, ಶಾರದಾ, ಜಯಂತಿ ಇತರರು ಸಹಿ ಮಾಡಿದರು.