ಪರಶುರಾಮರು ನಡೆದಾಡಿದ ಭೂಮಿ ಯೆಂಬ ಐತಿಹ್ಯ ಹೊಂದಿರುವ ಕೊಡ್ಲಿಪೇಟೆ ಭಾಗದಲ್ಲಿ ಹೆಚ್ಚಿನ ಮಠ ಗಳಿದ್ದು, ಭಕ್ತರ ಪಾಲಿಗೆ ಆಶ್ರಯದ ತಾಣಗಳಾಗಿವೆ. ಕೊಡ್ಲಿಪೇಟೆ-ಸಕಲೇಶಪುರ ಮುಖ್ಯರಸ್ತೆಗೆ ಹೊಂದಿಕೊAಡAತಿರುವ ಕಲ್ಲಳ್ಳಿ ಮಠವು ಈ ನಿಟ್ಟಿನಲ್ಲಿ ಭಕ್ತರಿಗೆ ಆಶ್ರಯ, ಮಾರ್ಗದರ್ಶನ ನೀಡುತ್ತಾ ಧಾರ್ಮಿಕತೆಯ ನೆರಳನ್ನು ಒದಗಿಸುತ್ತಿದೆ. ಜಮದಗ್ನಿ ಹಾಗೂ ಮುನಿಜನರ ಸಂಹರಿಸಿ ೨೧ ಬಾರಿ ಭೂ ಪ್ರದಕ್ಷಿಣೆಗೈದು ಕ್ಷತ್ರಿಯ ಕುಲವನ್ನೇ ನಾಶಗೈದ ಶ್ರೀಪರಶುರಾಮರು ತನ್ನ ಪಾಪ ಕಳೆಯಲು ಅನೇಕ ಪುಣ್ಯಕ್ಷೇತ್ರಗಳ ಕಲ್ಯಾಣಿ, ತೀರ್ಥ ಹೊಳೆಯಲ್ಲಿ ಸ್ನಾನ ಮಾಡಿ ಕೊನೆಯಲ್ಲಿ ಹೇಮಾವತಿ ನದಿತೀರದಲ್ಲಿ ತನ್ನ ಪರಶುವನ್ನು ಬಂಡೆಗೆ ಹೊಡೆದ ಸಂದರ್ಭ ಅದು ಹಲವು ಭಾಗಗಳಾದವು. ದೊಡ್ಡ ಭಾಗ ಬಿದ್ದ ಜಾಗ ದೊಡ್ಡಕೊಡ್ಡಿ ಗ್ರಾಮವೆಂದು, ಸಣ್ಣ ಭಾಗ ಬಿದ್ದ ಜಾಗ ಕಿರಿಕೊಡ್ಡಿ ಗ್ರಾಮವೆಂದು ಪರಶುವಿನ ಕೆಳಭಾಗ ಬಿದ್ದ ಜಾಗವನ್ನು ಕೆಲಗೊಡ್ಡಿ ಗ್ರಾಮವೆಂದು, ಕೊಡ್ಲಿಯ ಮುಖ್ಯಭಾಗ ಬಿದ್ದ ಜಾಗವನ್ನು ಕೊಡ್ಲಿಪೇಟೆ ಗ್ರಾಮವೆಂದು ಕರೆಯಲಾಗುತ್ತಿದೆ ಎಂಬುದು ಐತಿಹ್ಯ.

ಪರಶುರಾಮರ ಕೈಯಲ್ಲಿದ್ದ ಕೊಡ್ಲಿಯ ಹೊಡೆತಕ್ಕೆ ಕಲ್ಲು ಅರಳಿತೆಂಬ ನಂಬಿಕೆಯಿದ್ದು, ಅದೇ ಸ್ಥಳ ಕಲ್ಲಳ್ಳಿ ಗ್ರಾಮವಾಯಿತು. ಇಲ್ಲಿರುವ ಮಠವೇ ಶ್ರೀಕ್ಷೇತ್ರ ಕಲ್ಲಳ್ಳಿಮಠ. ಇದರ ಆರಂಭದಲ್ಲಿ ಶ್ರೀ ಮಹಾದೇವಸ್ವಾಮಿಗಳು ಮಠದ ಪೀಠಾಧಿಪತಿಗಳಾಗಿದ್ದರು. ಅವರ ಗದ್ದುಗೆ ಇದೀಗ ತಿಪಟೂರು ಹತ್ತಿರದ ಕೆಂಕೆರೆಯಲ್ಲಿದೆ. ನಂತರ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ೧೮೩೧-೩೭ರಲ್ಲಿ ಮಠಾಧಿಪತಿಗಳಾಗಿದ್ದರು. ಕೆಲವು ಕಾಲ ಪುಷ್ಪಗಿರಿಗೆ ತೆರಳಿ ಅಲ್ಲಿ ತಪಸ್ಸು ಮಾಡಿದರು. ಪುಷ್ಪಗಿರಿ ಬೆಟ್ಟದ ಮೇಲಿನ ಕಲ್ಲಿನಲ್ಲಿ ಈಗಲೂ ಪಾದಗಳ ಗುರುತಿವೆ. ಪ್ರತಿವರ್ಷ ಶಿವರಾತ್ರಿಯಂದು ದೀಪ ಬೆಳಗಿಸಲಾಗುತ್ತದೆ.

ಕಲ್ಲಳ್ಳಿ ಮಠಕ್ಕೆ ೧೮೪೯ ರಿಂದ ಕಾಶಿಸಂಸ್ಕೃತ ಪಂಡಿತರಾದ ಶ್ರೀ ವೀರಭದ್ರ ಮಹಾಸ್ವಾಮಿಗಳು ಮಠಾಧಿಪತಿಗಳಾಗಿದ್ದರು. ತಮ್ಮ ತಪಸ್ಸಿನ ಶಕ್ತಿಯಿಂದ ತಾಯಿ ಚೌಡೇಶ್ವರಿ ದೇವಿಯನ್ನು ಸ್ಥಾಪಿಸಿದರು. ಆಗಿನ ಕೊಡಗಿನ ಅರಸರಾದ ದೊಡ್ಡವೀರರಾಜೇಂದ್ರರು ಕಲ್ಲಳ್ಳಿ ಮಠಕ್ಕೆ ೧೨ ಎಕರೆ ಜಾಗವನ್ನು ಜಾಹಗೀರ್ ನೀಡಿ ಮಠವು ಅಭಿವೃದ್ಧಿ ಹೊಂದಲು ಪ್ರೋತ್ಸಾಹಿಸಿದರು.

ಶ್ರೀ ವೀರಭದ್ರ ಮಹಾಸ್ವಾಮಿಗಳು ತಮ್ಮ ೯೪ನೇ ವರ್ಷದಲ್ಲಿ (೧೯೪೩ರಲ್ಲಿ) ಸಜೀವ ಕ್ರಿಯಾಸಮಾಧಿ ಹೊಂದಿದರು. ಮಠದಲ್ಲಿ ಇವರ ಗದ್ದುಗೆಯೂ ಇದೆ. ೧೯೫೬ರಲ್ಲಿ ಶ್ರೀಸಂಗಮೇಶ್ವರಸ್ವಾಮಿಗಳು ಉತ್ತಾರಾಧಿಕಾರಿ ಗಳಾಗಿ ೧೯೬೯ರಲ್ಲಿ ಪಟ್ಟಾಧಿಕಾರ ಹೊಂದಿದರು.

ಈ ಸಮಯದಲ್ಲಿ ಭಕ್ತರ ನಿರ್ಲಕ್ಷದಿಂದ ಮಠದ ಆಸ್ತಿ ಪಾಳುಬಿದ್ದಿತು. ಶ್ರೀಗಳು ಅನಾರೋಗ್ಯದ ಕಾರಣದಿಂದ ೧೯೯೨ರಲ್ಲಿ ಲಿಂಗೈಕ್ಯರಾದರು. ನಂತರ ಶ್ರೀ ಮೋಕ್ಷಪತಿ ಸ್ವಾಮಿಗಳು ಉತ್ತಾರಾಧಿಕಾರಿಗಳಾಗಿ ನೇಮಕವಾದರು. ಭಕ್ತರು ಹಾಗೂ ಸ್ವಾಮೀಜಿಗಳ ಹೊಂದಾಣಿಕೆಯಿಲ್ಲದೆ ಹಿನ್ನೆಲೆ ೧೯೯೫ರಲ್ಲಿ ಕಲ್ಲಳ್ಳಿಮಠವನ್ನು ಭಕ್ತರಿಗೆ ಬಿಟ್ಟು, ರಾವಂದೂರಿನ ಮಠಕ್ಕೆ ತೆರಳಿದರು. ನಂತರದಲ್ಲಿ ಕಲ್ಲಳ್ಳಿಮಠವು ಶಿಥಿಲಾವಸ್ಥೆಗೆ ತಲುಪಿ ಪಾಳು ಬಿದ್ದಿತು. ಇದನ್ನು ಗಮನಿಸಿದ ಕೊಡ್ಲಿಪೇಟೆಯ ವೀರಶೈವ ಮಂಡಳಿಯವರು ಸಭೆ ಸೇರಿ ಮಠದ ಭಕ್ತರ ಸಮ್ಮುಖದಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಹೋಬಳಗಟ್ಟಿ ಗ್ರಾಮದ ಹೊಸಹಳ್ಳಿ ಹಿರೇಮಠದ ವೆ.ಮೂ. ಹೆಚ್. ಎಂ. ಮಲ್ಲಯ್ಯ ಮತ್ತು ಅನ್ನಪೂರ್ಣಮ್ಮನವರ ಪುತ್ರ ವಿನಾಯಕ ಸ್ವಾಮಿ ಅವರನ್ನು ಮಠಕ್ಕೆ ಕರೆತರಲಾಯಿತು. ಮಠಾಧೀಶರಾಗಿ ನೇಮಕಗೊಂಡ ವಿನಾಯಕ ಸ್ವಾಮಿ ಅವರ ಹೆಸರನ್ನು ಶ್ರೀ ರುದ್ರಮುನಿ ಮಹಾಸ್ವಾಮಿಗಳೆಂದು ಮರು ನಾಮಕರಣ ಮಾಡಲಾಯಿತು.

ಶ್ರೀಗಳು ಪೂರ್ವಾಶ್ರಮದಲ್ಲಿ-ಹರಪನಹಳ್ಳಿಯಲ್ಲಿ ಪ್ರೌಢಶಾಲೆ, ಗದಗಿನ ಜಗದ್ಗುರು ಶ್ರೀತೋಂಟದಾರ್ಯ ಸಂಸ್ಥಾನ ಮಠದಲ್ಲಿ ಪಿಯುಸಿ ಮತ್ತು ವಿಜಯ ಲಲಿತ ಮಹಾವಿದ್ಯಾಲಯದಲ್ಲಿ ಎಂ.ಎಫ್.ಎ. ಪದವಿ ಮುಗಿಸಿ ಗದಗಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಗದಗಿನ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳವರ ಮಠದಲ್ಲಿ ಪ್ರಿಂಟಿAಗ್ ಪ್ರೆಸ್ ಮೇಲ್ವಿಚಾರಕರಾಗಿದ್ದ ವಿನಾಯಕ ಸ್ವಾಮಿಯವರಿಗೆ, ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಕೊರಣೇಶ್ವರ ಮಠದ ಶ್ರೀ ಮುರುಘೇಂದ್ರ ಕೊರಣೇಶ್ವರ ಶಿವಯೋಗಿಗಳಿಂದ ೧೯೮೬ರಲ್ಲಿ ಕಾವಿ ಕ್ರಿಯಾದೀಕ್ಷೆ ನೀಡಲಾಯಿತು.

ಪಟ್ಟದಕಲ್ಲು ಶ್ರೀ ಬಸವಣ್ಯಪ್ಪ ಗಳಿಂದ ಶ್ರೀ ಮ.ಘ.ಚ. ರುದ್ರಮುನಿ ಮಹಾಸ್ವಾಮಿಗಳೆಂದು ಮರು ನಾಮಕರಣ ಮಾಡಲಾಯಿತು. ೧೯೯೦ ರಲ್ಲಿ ಶ್ರೀ ಫಲಾಹಾರೇಶ್ವರರ ಮಠ, ೧೯೯೩ ರಲ್ಲಿ ಬದಾಮಿ ಪಟ್ಟದಕಲ್ಲು ಹತ್ತಿರದ ಹಂಸನೂರು ಶ್ರೀ ಶಿವಾನಂದ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು, ಪೂಜಾದಿಕಾರ್ಯಗಳು, ಜ್ಯೋತಿಷ್ಯ, ಆಯುರ್ವೇದ, ಸಂಸ್ಕೃತ, ಶಿವಾನುಭವ ಪಡೆದ ಶ್ರೀಗಳು, ೭.೨.೧೯೯೫ ರಲ್ಲಿ ಕಲ್ಲಳ್ಳಿ ಮಠದ ಪೀಠಾಧಿಕಾರಿಗಳಾಗಿ ನೇಮಕಗೊಂಡರು. ಇದಾಗಿ ೨೮ ವರ್ಷದ ತರುವಾಯ ೧೦.೨.೨೦೨೩ ರಂದು ಶ್ರೀಗಳಿಗೆ ಗುರು ಪಟ್ಟಾಧಿಕಾರ ನೆರವೇರಿಸಲಾಯಿತು. ಸಾಹಿತಿ ಚಂದ್ರಶೇಖರ ಮಲ್ಲೋರಹಟ್ಟಿ ಅವರು ಶ್ರೀಕ್ಷೇತ್ರದ ಇತಿಹಾಸವನ್ನು ತಮ್ಮ ಲೇಖನಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಕಲ್ಲಳ್ಳಿ ಮಠಕ್ಕೆ ಪೀಠಾಧಿಪತಿಗಳಾಗಿದ್ದರೂ ಸಂಪೂರ್ಣ ಆಡಳಿತದ ಅವಕಾಶ ಸ್ವಾಮೀಜಿಗೆ ಇರಲಿಲ್ಲ. ಇದೀಗ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿದ್ದು, ಶ್ರೀ ರುದ್ರಮುನಿ ಸ್ವಾಮೀಜಿಗಳಿಗೆ ಮಠದ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ. ಜ್ಯೋತಿಷ್ಯ, ಸಂಸ್ಕೃತ, ಆಯುರ್ವೆದಗಳಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಿರುವ ಶ್ರೀಗಳು, ತಮ್ಮ ಬಳಿಗೆ ಬರುವ ಭಕ್ತರಿಗೆ ಸದಾ ಮಾರ್ಗದರ್ಶನ ಮಾಡುತ್ತಾ ಬರುತ್ತಿದ್ದಾರೆ. ಕಲ್ಲಳ್ಳಿ ಮಠದಲ್ಲಿ ನೆಲೆಸಿರುವ ಶ್ರೀ ಚೌಡೇಶ್ವರಿ ದೇವಿಯು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸುವ ಶ್ರದ್ಧೆಯ ಕೇಂದ್ರವಾಗಿದೆ.

ಮಠದ ಜಾಗವನ್ನು ಅಭಿವೃದ್ಧಿಗೊಳಿಸುವ ಮೂಲಕ ಸಾಮಾಜಿಕ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವ ಜವಾಬ್ದಾರಿ ಶ್ರೀಗಳ ಮೇಲಿದ್ದು, ಮುಂದಿನ ದಿನಗಳಲ್ಲಿ ಮಠವನ್ನು ಅಭಿವೃದ್ಧಿಗೊಳಿಸುವ ಚಿಂತನೆಯನ್ನು ಹೊಂದಿದ್ದಾರೆ. ಅನ್ನ, ಜ್ಞಾನ ದಾಸೋಹದೊಂದಿಗೆ ಶ್ರೀಕ್ಷೇತ್ರ ಕಲ್ಲಳ್ಳಿ ಮಠವು ಈ ಭಾಗದ ಭಕ್ತರ ಪಾಲಿಗೆ ಧಾರ್ಮಿಕ, ಅದ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೇಂದ್ರವಾಗಿ ರೂಪುಗೊಂಡಿದೆ. ಕೊಡ್ಲಿಪೇಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಒಟ್ಟಾರೆ, ಪರಶುರಾಮರು ನಡೆದಾಡಿದ ಸ್ಥಳ, ಕೊಡ್ಲಿಯು ಕಲ್ಲಿಗೆ ಬಡಿದು ಕಲ್ಲರಳಿದ ಸ್ಥಳವೆಂದು ಪುರಾಣೇತಿಹಾಸ ಹೊಂದಿರುವ ಕಲ್ಲಳ್ಳಿ ಗ್ರಾಮದ ಶ್ರೀಮಠವು ಭಕ್ತರಿಗೆ ನೆರಳು ನೀಡುವ ಆಲದ ಮರದಂತಿದೆ. ಮುಂದಿನ ದಿನಗಳಲ್ಲಿ ಶ್ರೀಮಠವು ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದ್ದು, ಭಕ್ತರು ಹಾಗೂ ಸರ್ಕಾರದ ಸಹಕಾರ ಅಗತ್ಯವಾಗಿದೆ. ಜ್ಞಾನಸಂಪನ್ನ, ಸೌಮ್ಯ ವ್ಯಕ್ತಿತ್ವದ ಶ್ರೀರುದ್ರಮುನಿ ಸ್ವಾಮೀಜಿಗಳು ಶ್ರೀ ಮಠದ ಉಸ್ತುವಾರಿ ವಹಿಸಿದ್ದು, ಮಠದ ಅಭಿವೃದ್ಧಿಯತ್ತ ಚಿಂತನೆ ಹರಿಸಿದ್ದಾರೆ. ಭಕ್ತರು ಇವರೊಂದಿಗೆ ಕೈಜೋಡಿಸ ಬೇಕಿದೆ.

-ವಿಜಯ್ ಹಾನಗಲ್,

ಸೋಮವಾರಪೇಟೆ.

ಮೊ:೯೯೬೪೬೧೮೩೬೩