ಕೊಡ್ಲಿಪೇಟೆ, ಏ. ೨೯: ರೈತರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಿ ನಾಪಂಡ ಮುತ್ತಪ್ಪ ಅವರನ್ನು ಗೆಲ್ಲಿಸಿದರೆ ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಕೊಡಗಿನ ಸಮಗ್ರ ಅಭಿವೃದ್ಧಿಗೆ ಅವಕಾಶ ಸಿಗಲಿದೆ ಎಂದು ಜೆಡಿಎಸ್ ಮುಖಂಡರಾದ ಭವಾನಿ ರೇವಣ್ಣ ಹೇಳಿದರು.
ಕೊಡ್ಲಿಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊAದಿಗೆ ಚುನಾವಣಾ ಪ್ರಚಾರಾರ್ಥ ರೋಡ್ ಶೋ ನಡೆಸಿದ ಭವಾನಿ ಅವರು, ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪರವಾಗಿ ಮತಯಾಚನೆ ಮಾಡಿದರು.
ಕೊಡ್ಲಿಪೇಟೆಯ ಹೊಸ ಮುನ್ಸಿಪಾಲಿಟಿ ಜಂಕ್ಷನ್‌ನ ಗಣಪತಿ ದೇವಸ್ಥಾನದ ಸಮೀಪದಿಂದ ಪಟ್ಟಣದ ಮುಖ್ಯ ಮಾರ್ಗಗಳಲ್ಲಿ ಪ್ರಚಾರ ವಾಹನದೊಂದಿಗೆ ರೋಡ್ ಶೋ ನಡೆಯಿತು.
ಜೆಡಿಎಸ್ ಸರ್ಕಾರ ಬಂದ ನಂತರ ಕೊಡಗಿನಲ್ಲಿ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕೊಡಗಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭವಾನಿ ರೇವಣ್ಣ ಹೇಳಿದರು.
ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಮಾತನಾಡಿ, ಅನೇಕ ವರ್ಷಗಳಿಂದ ಶಾಸಕರಾಗಿರುವವರು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಕೂಗು ಕೇಳಿ ಬರುತ್ತಿದೆ.
(ಮೊದಲ ಪುಟದಿಂದ) ಜನರು ಒಗ್ಗಟ್ಟಾಗಿದ್ದಾರೆ. ಈ ಬದಲಾವಣೆ ಜೆಡಿಎಸ್ ಮೂಲಕ ಆಗಲಿದೆ ಎಂದರು.
ರೈತ ಪರ ಹೆಚ್ಚಿನ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಮಾತ್ರ ಕೊಡಗಿನ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಈ ನಿಟ್ಟಿನಲ್ಲಿ ರೈತರು, ಬಡವರು, ಕಾರ್ಮಿಕರು, ದೀನ ದಲಿತರ ಪರವಿರುವ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ಕರ್ನಾಟಕದಲ್ಲಿ ಸದೃಢ ಸರ್ಕಾರ ರಚನೆಗೆ ಮುನ್ನುಡಿಯಾಗಬೇಕೆಂದು ನಾಪಂಡ ಮುತ್ತಪ್ಪ ಮನವಿ ಮಾಡಿದರು.
ರೋಡ್ ಶೋ- ಮತಯಾಚನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಜಿಲ್ಲಾ ಕಾರ್ಯದರ್ಶಿ ಮೋಹನ್ ಮೌರ್ಯ, ಪ್ರಮುಖರಾದ, ನಾಪಂಡ ಮುದ್ದಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪುಟ್ಟರಾಜು ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ನಂತರ ಕೊಡ್ಲಿಪೇಟೆಯಿಂದ ಶನಿವಾರಸಂತೆಯವರೆಗೆ ಬೈಕ್ ಜಾಥಾ ನಡೆಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರುಗಳ ಪರವಾಗಿ ಕಾರ್ಯಕರ್ತರು ಜೈಕಾರ ಮೊಳಗಿಸಿದರು.