ಹೆಬ್ಬಾಲೆ, ಏ. ೨೮: ಉತ್ತರ ಕೊಡಗಿನ ಗಡಿಗ್ರಾಮ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಚುನಾವಣಾ ಪ್ರಚಾರ ನಡೆಸಿದರು.
ಮಣಜೂರು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಮಂಥರ್ ಗೌಡ ಅವರು, ಅಪಾರ ಬೆಂಬಲಿಗರೊAದಿಗೆ ರೋಡ್ ಶೋ ನಡೆಸಿದರು. ಶಿರಂಗಾಲ, ಮೂಡಲಕೊಪ್ಪಲು, ಗಾಂಧಿನಗರ ಸೇರಿದಂತೆ ಶಿರಂಗಾಲ ಗೇಟ್, ನಲ್ಲೂರು ಗ್ರಾಮದಲ್ಲಿ ಮನೆ ಮನೆ ತೆರಳಿ ಪಕ್ಷದ ಪ್ರಣಾಳಿಕೆಯ ಕರಪತ್ರಗಳನ್ನು ಮತದಾರರಿಗೆ ನೀಡಿದರು.
ಮಣಜೂರು ಹಾಗೂ ಶಿರಂಗಾಲದಲ್ಲಿ ಗ್ರಾಮದ ಮಹಿಳೆಯರು ಆರತಿ ಮಾಡಿ ಪುಷ್ಪಾಹಾರ ಹಾಕಿ, ಪಟಾಕಿ ಸಿಡಿಸಿ ಬರಮಾಡಿಕೊಂಡರು. ಶಿರಂಗಾಲ ಪೇಟೆಬೀದಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಮಂಥರ್ ಗೌಡ ಅವರನ್ನು ಗೌರವಿಸಿದರು. ಕೊಪ್ಪಲು ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪ್ರಚಾರ ವಾಹನದೊಂದಿಗೆ ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿಕೊAಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಸದಸ್ಯ ನಟೇಶ್ ಗೌಡ, ಜಿಲ್ಲಾ ಚುನಾವಣಾ ಉಸ್ತುವಾರಿ ಮಂಜುನಾಥ್ ಗುಂಡೂರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಮುಖಂಡರಾದ ಎಸ್.ಎಸ್. ಚಂದ್ರಶೇಖರ್, ಮಣಜೂರು ಸುರೇಶ್, ಧರಣೇಂದ್ರ, ಜೋಸೆಫ್ ವಿಕ್ಟರ್ ಸೋನ್ಸ್, ಬಿ.ಎಸ್. ಚಂದ್ರಶೇಖರ್, ಎನ್.ಎಸ್. ರಮೇಶ್, ಶೇಷಪ್ಪ, ಮಂಜುನಾಥ್, ವಿಜಯಕುಮಾರ್, ರೋಹನ್ ಇದ್ದರು.