ಕಣಿವೆ, ಏ. ೨೯: ಬಸವ ಜಯಂತಿ ಅಂಗವಾಗಿ ಗ್ರಾಮೀಣ ಪ್ರದೇಶಗಳ ಕೃಷಿಕರು ತಾವು ಸಾಕಿ ಸಲಹುವ ಎತ್ತು ಹಾಗೂ ಹಸುಗಳನ್ನು ಪೂಜಿಸುವುದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ.

ಮಣಜೂರು ಗ್ರಾಮದ ಕೃಷಿಕ ಸಿ.ಎನ್. ಮಂಜುನಾಥ್ ಹಾಗೂ ಕುಮಾರ್ ಎಂಬವರು ಬೆಳಿಗ್ಗೆಯೇ ತಾವು ಸಾಕಿರುವ ಹಾಲು ಕೊಡುವ ಹಸು ಕರುಗಳು ಹಾಗೂ ಭೂಮಿಯನ್ನು ಉಳುಮೆ ಮಾಡುವ ಎತ್ತುಗಳನ್ನು ಸ್ನಾನ ಮಾಡಿಸಿ ಅವುಗಳ ಕೊಂಬುಗಳಿಗೆ ಹರಳೆಣ್ಣೆ ಮಜ್ಜನಗೈದು ಅಲಂಕರಿಸುವ ಮೂಲಕ ಭಯ ಭಕ್ತಿಯಿಂದ ಪೂಜಿಸಿದರು.

ಹಸು ಎತ್ತುಗಳಿದ್ದರೆ ಕೃಷಿ. ಕೃಷಿ ಇದ್ದರೆ ಮಾತ್ರ ಬದುಕು ಎಂದು ಹೇಳಿದ ರೈತ ಮಂಜುನಾಥ್, ಪ್ರತೀ ವರ್ಷದ ಬಸವ ಜಯಂತಿ ಹಬ್ಬದ ದಿನದಂದು ತಮ್ಮ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಗೋಪೂಜೆ ಕಾರ್ಯಕ್ರಮದ ಬಳಿಕವೇ ನಾವು ಮನೆ ಮಂದಿ ಎಲ್ಲರೂ ಒಂದೆಡೆ ಕುಳಿತು ಸಾಮೂಹಿಕವಾಗಿ ಊಟ ಮಾಡುತ್ತೇವೆ ಎನ್ನುತ್ತಾರೆ.

ಹಾಗೆಯೇ ಶಿರಂಗಾಲ, ಹೆಬ್ಬಾಲೆ, ಮೂಡಲಕೊಪ್ಪಲು, ಹುಲುಸೆ, ಕಣಿವೆ, ಮುಳ್ಳುಸೋಗೆ ಮೊದಲಾದ ಗ್ರಾಮಗಳಲ್ಲಿನ ಕೃಷಿಕರು ಆಯಾಯ ಗ್ರಾಮಗಳ ಬಸವೇಶ್ವರ ದೇವಾಲಯಗಳ ಬಳಿ ತಳಿರು ತೋರಣಗಳನ್ನು ಕಟ್ಟಿ ಬಸವ ಜಯಂತಿಯನ್ನು ಆಚರಿಸಿದರು.