ಸೋಮವಾರಪೇಟೆ, ಏ. ೨೮: ಮಲೆನಾಡು ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಉತ್ಸವÀವಾದ ತೋಳೂರುಶೆಟ್ಟಳ್ಳಿ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿ ಯೊಂದಿಗೆ ಸಂಭ್ರಮದಿAದ ನೆರವೇರಿತು.

ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿAದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಹಲವು ಧಾರ್ಮಿಕ ಆಚರಣೆ ಗಳೊಂದಿಗೆ ವಿಜೃಂಭಣೆಯಿAದ ಜರುಗಿತು.

ಕೂತಿನಾಡಿಗೆ ಸೇರಿದ ತೋಳೂರು ಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ, ಕಂಬಳ್ಳಿ, ಊರೊಳಗಿನಕೊಪ್ಪ, ಕರಡಿಕೊಪ್ಪ ಸೇರಿದಂತೆ ಸುತ್ತಮುತ್ತಲ ೧೯ ಗ್ರಾಮಗಳ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮ ದೇವತೆಯಾದ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಲೆನಾಡು ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಉತ್ಸವÀವಾಗಿ ಹೆಸರು ಪಡೆದಿರುವ ಸುಗ್ಗಿ ಉತ್ಸವಕ್ಕೆ ಅಕ್ಕಪಕ್ಕದ ಜಿಲ್ಲೆಯವರೂ ಆಗಮಿಸುವದು ವಿಶೇಷ. ಸುಗ್ಗಿಯ ಕೊನೆಯ ದಿನದಂದು ವಿವಿಧೆಡೆ ನೆಲೆಸಿರುವ ಮಂದಿ ಗ್ರಾಮಕ್ಕೆ ಆಗಮಿಸುವದರಿಂದ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.

ತೋಳೂರುಶೆಟ್ಟಳ್ಳಿ ಗ್ರಾಮದ ನಡುಭಾಗದಲ್ಲಿರುವ ಸುಗ್ಗಿಬನದಲ್ಲಿ ನಿರ್ಮಿಸಿರುವ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಸುಗ್ಗಿ ಕಟ್ಟೆ ಎದುರು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಪುಷ್ಪಗಿರಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ದೇವಾಲಯ ಹಾಗೂ ಮುಳ್ಳಯ್ಯನಗಿರಿಗೆ ತೆರಳಿ ಮಳೆ ಕರೆಯುವ ಪದ್ಧತಿಯೊಂದಿಗೆ ಪ್ರಾರಂಭವಾದ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ, ಬೀರೇದೇವರ ಹಬ್ಬ, ಗುಮ್ಮನ ಮರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣ, ಕೊಂಡ ಹಾಯುವದು, ಮೊದಲ ಬೇಟೆ, ಊರು ಸುಗ್ಗಿ, ದೇವರ ಗಂಗಾ ಸ್ನಾನ, ಆವರಣ ಶೃಂಗಾರ, ನೆಂಟರ ಸುಗ್ಗಿ, ಹಗಲು ಸುಗ್ಗಿ, ಹೆದ್ದೇವರ ಸುಗ್ಗಿ ಸಾರು ವಿಧಿವಿಧಾನಗಳೊಂದಿಗೆ ಈ ವರ್ಷದ ತೋಳೂರುಶೆಟ್ಟಳ್ಳಿಯ ಹಗಲು ಸುಗ್ಗಿ ಸಂಭ್ರಮದಿAದ ನಡೆಯಿತು.

ಅನಾದಿ ಕಾಲದಿಂದಲೂ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಈ ಉತ್ಸವವನ್ನು ಆಚರಿಸುತ್ತಿದ್ದು, ಕಳೆದ ೧೫ ದಿನಗಳಿಂದ ಗ್ರಾಮದಲ್ಲಿ ವಿವಿಧ ಕಟ್ಟುಪಾಡುಗಳನ್ನು ಅಳವಡಿಸಲಾಗಿತ್ತು. ಇಂದು ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಮಾಡಿ, ಎಡೆ ಸಮರ್ಪಣೆ ನಂತರ ಮೆರವಣಿಗೆ ಮೂಲಕ ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.

ದೇವರ ಒಡೆಕಾರರಾದ ಡಿ.ಎನ್. ಸುಧಾಕರ್, ಉಮೇಶ್, ಶಿವಕುಮಾರ್, ನವೀನ್ ಸೇರಿದಂತೆ ಇತರರು ಕಳೆದ ೧೫ ದಿನಗಳಿಂದ ವಿಶೇಷ ಶುದ್ಧಿಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಊರಿಗೆ ಸಮಯಕ್ಕೆ ಸರಿಯಾಗಿ ಮಳೆ ಸುರಿದು ಉತ್ತಮ ಬೆಳೆ ಬೆಳೆಯಲಿ, ಜನ ಮತ್ತು ಜಾನುವಾರುಗಳಿಗೆ ಯಾವದೇ ರೀತಿಯ ತೊಂದರೆಯಾಗದಿರಲಿ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು.

ಶುಕ್ರವಾರದಂದು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಹಾಗೂ ಮಡೇ ಉತ್ಸವ ನಡೆಯಿತು. ಗ್ರಾಮಸ್ಥರು ದೇವರಿಗೆ ಎಡೆಯನ್ನಿರಿಸಿ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವ ಸಂದರ್ಭ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಈಡುಗಾಯಿ ಸೇವೆ ಸಲ್ಲಿಸಿದರು.

ಗ್ರಾಮಸ್ಥರಿಂದ ಮೂಡಿಬಂದ ಸಾಂಪ್ರದಾಯಿಕ ಸುಗ್ಗಿ ಕುಣಿತ ಗ್ರಾಮೀಣ ಸೊಗಡಿನ ಜನಪದದ ಜೀವನ ಕ್ರಮವನ್ನು ಬಿಂಬಿಸುತ್ತಿತ್ತು. ಸುಗ್ಗಿ ಹಬ್ಬದ ಉಸ್ತುವಾರಿಯನ್ನು ಸಮಿತಿಯ ಅಧ್ಯಕ್ಷ ಡಿ.ಎನ್. ರಾಜಗೋಪಾಲ್, ಕಾರ್ಯದರ್ಶಿ ಡಿ.ಎಲ್. ಜಗದೀಶ್, ಖಜಾಂಚಿ ಮನೋಹರ್, ಎಂ.ಡಿ. ರಾಜಪ್ಪ, ಟಿ.ಕೆ. ಸುಬ್ಬಯ್ಯ, ಎಂ.ಇ. ಕೃಷ್ಣಪ್ಪ, ಡಿ.ಜಿ. ನಾಗರಾಜು ಸೇರಿದಂತೆ ಇತರರು ವಹಿಸಿದ್ದರು.

ಸುಗ್ಗಿ ಆಚರಣೆಯಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿರುವ ಸುಗ್ಗಿ ಕುಣಿತದಲ್ಲಿ ರಾಜ್ಯ ಮಟ್ಟದಲ್ಲಿ ಸುಗ್ಗಿ ಕುಣಿತ ಪ್ರದರ್ಶಿಸಿ ಗುರುತಿಸಿ ಕೊಂಡಿರುವ ಗ್ರಾಮದ ಎಸ್.ಪಿ. ಮಾಚಯ್ಯ, ಎಸ್.ಕೆ. ಬಸವರಾಜು, ಎಸ್.ಬಿ. ರಾಜಕುಮಾರ್, ಎಸ್.ಜಿ. ಪ್ರದೀಪ್, ಎಸ್.ಯು. ಕೃಷ್ಣಪ್ಪ, ಎಸ್.ಬಿ. ರವಿಕುಮಾರ್ ಮತ್ತು ತಂಡದವರು ಸಾಂಪ್ರದಾಯಿಕ ಧಿರಿಸಿನೊಂದಿಗೆ ಸುಗ್ಗಿ ಕುಣಿತವನ್ನು ಪ್ರದರ್ಶಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಹರಪಳ್ಳಿ ರವೀಂದ್ರ, ಮಂಜೂರು ತಮ್ಮಣ್ಣಿ, ಕೆ.ಟಿ. ಪರಮೇಶ್ ಸೇರಿದಂತೆ ಗ್ರಾಮಸ್ಥರು, ಸಾವಿರಾರು ಮಂದಿ ಭಕ್ತಾದಿಗಳು ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು.

-ವಿಜಯ್ ಹಾನಗಲ್