ಮಡಿಕೇರಿ, ಏ. ೨೮: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜನ್ನು ಕೊಡಗು ವಿಶ್ವವಿದ್ಯಾ ನಿಲಯದ ಪ್ರಾದೇಶಿಕ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆ ಇದೆ ಎಂದು ನೂತನ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ್ ತಿಳಿಸಿದ್ದಾರೆ.

ಫೀ.ಮಾ. ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿದ ಅವರು, ಮಾತನಾಡಿ, ಮುಂದಿನ ವರ್ಷ ಕಾಲೇಜು ಅಮೃತ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ನೂತನ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸುವುದು ಮತ್ತು ಇರುವ ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಡಗು ವಿಶ್ವವಿದ್ಯಾನಿಲಯ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಮುಂಚೂಣಿ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನಗಳಿಸುವಂತಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕರೆ ನೀಡಿದರು.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಪ್ರಚಲಿತ ದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸೌಲಭ್ಯಗಳ ಕುರಿತು ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತರಗತಿ ಪ್ರತಿನಿಧಿ ಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಇಸಿಸಿಸಿ, ಕ್ರೀಡೆ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗಳೊಂದಿಗೆ ಚರ್ಚಿಸಿದರು.

ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ ಕಾಲೇಜಿನ ಇತಿಹಾಸ, ದೃಷ್ಟಿಕೋನ, ಸಾಧನೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ನೂತನ ಕುಲಪತಿಯವರನ್ನು ಗೌರವಪೂರ್ವಕ ವಾಗಿ ಸನ್ಮಾನಿಸಲಾಯಿತು. ಪರೀಕ್ಷಾಂಗ ಕುಲಸಚಿವ ಡಾ. ಸೀನಪ್ಪ ಹಾಗೂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಕೆ.ಕೆ. ಧರ್ಮಪ್ಪ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಹೆಚ್.ಆರ್. ರಮೇಶ್ ಕುಲಪತಿ ಯವರನ್ನು ಪರಿಚಯಿಸಿದರು. ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕ ಎಂ.ಎನ್. ರವಿಶಂಕರ್ ವಂದಿಸಿದರು. ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಸಂಯೋಜಕ ಕೆ.ಎಂ. ಪೂಣಚ್ಚ ನಿರೂಪಿಸಿದರು.

ನಂತರ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ್, ಪರೀಕ್ಷಾಂಗ ಕುಲಸಚಿವ ಡಾ. ಸೀನಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಕೆ.ಕೆ. ಧರ್ಮಪ್ಪ ಹಾಗೂ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ ಅವರು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಅವರನ್ನು ಭೇಟಿಯಾಗಿ ಸನ್ಮಾನಿಸಿ ಉಭಯಕುಶಲೋಪರಿ ವಿಚಾರಿಸಿದರು. ಕೊಡಗಿನ ಶೈಕ್ಷಣಿಕ ಕ್ಷೇತ್ರದ ಉನ್ನತೀರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆದರು.