ಸೋಮವಾರಪೇಟೆ, ಏ. ೨೮: ಕಾಫಿ ಬೆಳೆಗಾರರ ೧೦ ಎಚ್.ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ರೈತರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡುವ ರಾಜಕೀಯ ಪಕ್ಷವನ್ನು ಈ ಬಾರಿ ರೈತ ಸಂಘ ಬೆಂಬಲಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಮಾತನಾಡಿ, ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದಾರೆ. ಅತೀವೃಷ್ಟಿ, ಅನಾವೃಷ್ಟಿಯಿಂದ ರೈತರು ಸಾಲಗಾರರಾಗಿ ಸಂಕಷ್ಟದಲ್ಲಿದ್ದಾರೆ ಎಂದರು.

ಮೇ ೧೦ ರ ಒಳಗೆ ರಾಜಕೀಯ ಪಕ್ಷಗಳು ಕಾಫಿ ಬೆಳೆಗಾರರಿಗೆ ಈ ಬಗ್ಗೆ ಭರವಸೆ ನೀಡಬೇಕು. ರೈತ ಸಂಘದ ಹೋರಾಟದಿಂದ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಚುನಾವಣೆ ನಂತರ ಬಿಲ್ ಬಾಕಿ ಉಳಿಸಿಕೊಂಡಿರುವ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ನವರು ಕಡಿತಗೊಳಿಸಬಹುದು. ಇದಕ್ಕೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು.

ಭತ್ತ, ಅಡಕೆ, ತೆಂಗು, ಕಬ್ಬು, ಹೊಗೆಸೊಪ್ಪು ಬೆಳೆಗಾರರಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಕಾಫಿ ಉದ್ಯಮದಿಂದ ಎರಡೂವರೆ ಸಾವಿರ ಕೋಟಿ ರೂ.ಗಳಷ್ಟು ತೆರಿಗೆಯಿಂದ ಆದಾಯ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಕಾಫಿ ಬೆಳೆಗಾರರಿಗೆ ವಾರ್ಷಿಕ ೫೦೦ ಕೋಟಿ ರೂ.ಗಳನ್ನು ಉಚಿತ ವಿದ್ಯುತ್‌ಗಾಗಿ ನೀಡದೆ ಸರ್ಕಾರಗಳು ಮೋಸ ಮಾಡುತ್ತಿವೆ ಎಂದು ದೂರಿದರು.

ಈಗಾಗಲೇ ಸರ್ಕಾರ ಕಾಫಿ ಬೆಳೆಗಾರರ ೧೦ಎಚ್.ಪಿ ವರೆಗಿನ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದೆ. ಅದರೆ, ಹಲವು ಷರತ್ತು/ನಿಬಂಧನೆಗಳಗೊಳಪಟ್ಟು, ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ ಕಟ್ಟಿದರೆ, ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನು ರೈತರು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಂಘದ ಸಂಚಾಲಕ ಎಸ್.ಬಿ. ರಾಜಪ್ಪ ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ೫ ಸಾವಿರ ಕಾಫಿ ಬೆಳೆಯ ವಿದ್ಯುತ್ ಪಂಪ್‌ಸೆಟ್‌ಗಳಿವೆ. ಅದರಲ್ಲಿ ೪ ಸಾವಿರ ಮಂದಿ ಸಬ್ಸಿಡಿಗೆ ಅರ್ಜಿ ಸಲ್ಲಿಸಿಲ್ಲ. ನಿಗದಿತ ಶುಲ್ಕ, ವಿದ್ಯುತ್ ಬಿಲ್ ಮೇಲೆ ಬಡ್ಡಿ, ಚಕ್ರಬಡ್ಡಿ ಸೇರಿದಂತೆ ಬಡ ಕಾಫಿ ಬೆಳೆಗಾರರ ವಿದ್ಯುತ್‌ಬಿಲ್ ರೂ. ಲಕ್ಷಗಳಷ್ಟು ತಲುಪಿದೆ. ಕಾಫಿ ಬೆಳೆಗಾರರು ಎಚ್ಚೆತ್ತುಕೊಳ್ಳಬೇಕು ಎಂದರು.

ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮಘಟ್ಟ ಸೂಕ್ಷö್ಮಪರಿಸರ ವಲಯಕ್ಕೆ ಸೋಮವಾರಪೇಟೆ ತಾಲೂಕಿನ ೧೧ ಗ್ರಾಮಗಳು, ಮಡಿಕೇರಿಯ ೨೩ ಗ್ರಾಮಗಳು, ವೀರಾಜಪೇಟೆಯ ೨೧ ಗ್ರಾಮಗಳು ಸೇರಿವೆ. ಅಲ್ಲಿನ ರೈತರು ಎಲ್ಲಿಗೆ ಗುಳೇ ಹೋಗಬೇಕು. ವರದಿಗೆ ಅಕ್ಷೇಪವಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯ ಆತಂಕ ಈಗಲೂ ಇದೆ. ಅರಣ್ಯ ಇಲಾಖೆ ಈಗಾಗಲೇ ಗಡಿ ಗುರುತು ಕಾರ್ಯ ಮಾಡುತ್ತಿದೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಂಘದ ಕೋಶಾಧಿಕಾರಿ ಲಕ್ಷö್ಮಣ್ ಹೇಳಿದರು. ಗೋಷ್ಠಿಯಲ್ಲಿ ರೈತ ಮುಖಂಡ ರಾಜಶೇಖರ್ ಇದ್ದರು.