ಸಿದ್ದಾಪುರ, ಏ. ೨೮: ಮತಗಟ್ಟೆ ಸಂಖ್ಯೆ ೧೧೦ ಮತ್ತು ೧೧೧ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೧೦೦ ಮಿ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಸುವಂತೆ ಕೋರಿ ಗ್ರಾ.ಪಂ. ಸದಸ್ಯರು ಮನವಿ ಸಲ್ಲಿಸಿದ್ದಾರೆ.

ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಪ್ರೇಮ, ಸಮೀರ, ದೇವಜಾನು ಅವರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರನ್ನು ಭೇಟಿಯಾಗಿ ಅಗತ್ಯ ಚಿತ್ರೀಕರಣದ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಅವರು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯೆ ಪ್ರೇಮ ಈ ಪ್ರದೇಶದಲ್ಲಿ ಯಾವುದೇ ಬೀದಿ ದೀಪಗಳ ಅಳವಡಿಕೆಯಾಗಿಲ್ಲ. ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಈ ಪ್ರದೇಶದಲ್ಲಿ ಶೇಖರಣೆ ಮಾಡಿದ್ದು, ಎರಡು ವಾರದ ಹಿಂದೆ ಶೇಖರಣೆ ಮಾಡಿಟ್ಟಂತಹ ತ್ಯಾಜ್ಯದ ಗೋದಾಮಿಗೆ ಬೆಂಕಿ ಅವಘಡ ನಡೆದಿತ್ತು.

ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿರುವುದರಿಂದ ಸೊಳ್ಳೆ, ನೊಣಗಳು ಹೆಚ್ಚಿವೆ. ಈ ಮತಗಟ್ಟೆ ಸುತ್ತ ನೂರಾರು ಕುಟುಂಬಗಳು ಇದ್ದು, ಹೊರಗಿನಿಂದ ಬರುವ ಸಿಬ್ಬಂದಿಗಳಿಗೆ ಮಾರಕ ರೋಗ ಹರಡುವ ಭೀತಿ ಇದೆ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಎಷ್ಟೇ ಪ್ರಸ್ತಾಪಿಸಿದರೂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯಿAದ ಸೂಕ್ತ ಸ್ಪಂದನ ಸಿಕ್ಕಿಲ್ಲವೆಂದು ಕಾರ್ಯನಿರ್ವಾಹಣಾಧಿಕಾರಿಗೆ ಮಾಹಿತಿ ನೀಡಿದರು.