ಮೋದಿ ವಿಷದ ಹಾವು ಇದ್ದಂತೆ: ಮಲ್ಲಿಕಾರ್ಜುನ ಖರ್ಗೆ

ಗದಗ, ಏ. ೨೭: ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಎಂದು ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗಲ್ಲ. ಗುಜರಾತಿನವರು ಹೇಗೆ ಇಲ್ಲಿನ ಮಣ್ಣಿನ ಮಕ್ಕಳ ಬಳಿ ನಮಗೆ ಓಟು ಕೊಡಿ ಎಂದು ಕೇಳುತ್ತಾರೆ. ನಾವು ಕರ್ನಾಟಕದ ಮಣ್ಣಿನ ಮಕ್ಕಳು ನಮಗೂ ಕನ್ನಡ ಅಭಿಮಾನ ಇದೆ. ನರೇಂದ್ರ ಮೋದಿ ಎಂದರೆ ವಿಷದ ಹಾವಿದ್ದಂತೆ. ವಿಷ ಹೌದೋ ಇಲ್ಲ ಎಂದು ನೆಕ್ಕಿ ನೋಡಿದ್ರೆ ಸತ್ತಂತೆ. ಬಿಜೆಪಿಯ ಸಿದ್ಧಾಂತ, ಐಡಿಯಾಲಜಿ ಏನಿದೆ ಅದು ದೇಶಕ್ಕೆ ಕೆಟ್ಟದಾಗಿದೆ. ಮೋದಿಯ ವಿಚಾರಧಾರೆಯೇ ದೇಶವನ್ನು ಹಾಳು ಮಾಡುತ್ತಿದೆ. ಈ ದೇಶದ ಬಗ್ಗೆ ಪ್ರತಿಯೊಬ್ಬರು ಚಿಂತೆ ಮಾಡಬೇಕಿದೆ. ದೇಶ ಮುಗಿಸೋಕೆ ಮೋದಿಯೊಬ್ಬರೇ ಸಾಕು. ಯಾವನು ಗುಜರಾತ್‌ನಿಂದ ಬರಲಿ, ಅಹ್ಮದಾಬಾದ್‌ನಿಂದ ಬರಲಿ ಯಾರಿಗೂ ಬಗ್ಗಲ್ಲ ಎಂದು ಹೇಳಿದರು. ಒಬ್ಬ ದೇಶದ ಪ್ರಧಾನಿಯಾಗಿ ಹಳ್ಳಿ, ಹಳ್ಳಿ, ತಾಲೂಕು ಅಡ್ಡಾಡ್ಡುತ್ತೀದ್ದೀರಾ, ಮೋದಿ ಮುಖ ನೋಡಿ ಮತ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾರ್ಪೊರೇಷನ್ ಇಲೆಕ್ಷನ್‌ನಲ್ಲಿಯೂ ಸಹ ಮೋದಿ ನೋಡಿ ಮತ ಕೊಡಿ ಎಂದು ಹೇಳುತ್ತಾರೆ. ಹಾಗಾದರೆ ನಿಮ್ಮದು ಎಷ್ಟು ಮುಖ ಇದೆ. ಇಂತಹ ಆಸೆಬುರುಕರಿಗೆ ಕುರ್ಚಿಗಾಗಿ ವ್ಯಾಮೋಹ. ಯಾವುದಾದರೂ ಒಂದು ಖುರ್ಚಿ ಖಾಲಿ ಇದ್ದರೆ ಅವರೇ ಬಂದು ಕೂರುತ್ತಾರೆ ಎಂದರು. ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ ೧೫ ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು, ಈಗ ಕಪ್ಪು ಹಣ ಅದಾನಿ ಬಳಿ ಇಟ್ಟಿದ್ದಾರೇನು? ಯುವಕರಿಗೆ ನೌಕರಿ ಕೊಡುತ್ತೇವೆ ಎಂದರು. ೯ ವರ್ಷದಿಂದ ನೀವು ೧೮ ಕೋಟಿ ಜನರಿಗೆ ನೌಕರಿ ಕೊಡಬಹುದಿತ್ತು. ಬರೀ ಸುಳ್ಳು ಹೇಳಿರುವುದು ಜನರಿಗೆ ಗೊತ್ತಾಗಿದೆ. ೩೦ ಲಕ್ಷ ಸರ್ಕಾರಿ ನೌಕರಿ ಖಾಲಿ ಇವೆ. ಅದನ್ನಾದರೂ ತುಂಬಿ. ಕರ್ನಾಟಕದಲ್ಲಿ ನೌಕರಿ ಖಾಲಿ ಇವೆ. ಇಲ್ಲಿ ಬೊಮ್ಮಾಯಿನೂ ತುಂಬ್ತಿಲ್ಲ, ಅಲ್ಲಿ ಮೋದಿನೂ ತುಂಬ್ತಿಲ್ಲ ಎಂದು ಕಿಡಿಕಾರಿದರು. ಈ ನಡುವೆ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮಲ್ಲಿಕಾರ್ಜುನ ಖರ್ಗೆ ಯೂಟರ್ನ್ ಹೊಡೆದಿದ್ದಾರೆ. ಹೇಳಿಕೆ ಸಂಬAಧ ಸ್ಪಷ್ಟನೆ ನೀಡಿರುವ ಅವರು, ನಾನು ಪ್ರಧಾನಿ ಮೋದಿಯವರನ್ನು ವಿಷದ ಹಾವು ಎಂದು ಹೇಳಿಲ್ಲ. ಭಾರತೀಯ ಜನತಾ ಪಾರ್ಟಿ ಹಾವು ಇದ್ದಂತೆ, ಅದನ್ನು ನೆಕ್ಕಿ ನೋಡುತ್ತೇನೆ ಅಂದರೆ ಸತ್ತು ಹೋಗ್ತಾರೆ ಎಂದು ಹೇಳಿದ್ದೆ. ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರು ಹೇಳಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು: ಅನುರಾಗ್ ಠಾಕೂರ್ ಕಿಡಿ

ನವದೆಹಲಿ, ಏ. ೨೭: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಅನುರಾಗ್ ಠಾಕೂರ್, ಖರ್ಗೆ ಅವರನ್ನು ಯಾರೊಬ್ಬರೂ ತಮ್ಮ ಪಕ್ಷದ ಮುಖ್ಯಸ್ಥ ಎಂದು ಒಪ್ಪಿಕೊಳ್ಳದ ಕಾರಣ ಈ ಹೇಳಿಕೆ ನೀಡಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಖರ್ಗೆಯವರ ಹೇಳಿಕೆಗೆ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ, ಯಾರೂ ಅವರನ್ನು ಪರಿಗಣಿಸುತ್ತಿಲ್ಲ. ಆದ್ದರಿಂದ ಅವರು ಸೋನಿಯಾ ಗಾಂಧಿ ನೀಡಿದ್ದಕ್ಕಿಂತ ಕೆಟ್ಟ ಹೇಳಿಕೆ ನೀಡಲು ಯೋಚಿಸಿದ್ದಾರೆ. ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು ಎಂದು ಠಾಕೂರ್ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಅವರು ಖರ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು, ಏ. ೨೭: ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ತಾ. ೨೮ ರಂದು (ಇಂದು) ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ನಾಳೆ ಗೀತಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಅವರು, ಈ ಹಿಂದೆ ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಗೆ ಬಿ.ಎಸ್. ಯಡಿಯೂರಪ್ಪ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಆದರೆ, ಯಡಿಯೂರಪ್ಪ ಅವರ ಎದುರು ಭಾರಿ ಮತಗಳ ಅಂತರದಿAದ ಸೋತಿದ್ದರು. ಬಂಗಾರಪ್ಪ ಅವರ ಐವರು ಮಕ್ಕಳಲ್ಲಿ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಮತ್ತು ಗೀತಾ ಶಿವರಾಜ್‌ಕುಮಾರ್ ಅವರು ರಾಜಕೀಯ ಜೀವನದಲ್ಲಿದ್ದಾರೆ. ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದು, ಈ ಬಾರಿ ಸೊರಬ ವಿಧಾನಸಭಾ ಚುನಾವಣೆಯಲ್ಲಿ ಸೆಣಸಲಿದ್ದಾರೆ. ೨೦೨೧ರ ಜುಲೈನಲ್ಲಿ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

ರಾಜ್ಯದಲ್ಲಿ ಪ್ರಧಾನಿ ಮೋದಿ ಎರಡು ರೋಡ್ ಶೋ, ೬ ಸಾರ್ವಜನಿಕ ಸಭೆ

ನವದೆಹಲಿ, ಏ. ೨೭: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರಾಂತ್ಯದಲ್ಲಿ ಎರಡು ಬೃಹತ್ ರೋಡ್‌ಶೋಗಳು ಮತ್ತು ಆರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಪ್ರಧಾನಿಯವರು ಏಪ್ರಿಲ್ ೨೯ ಮತ್ತು ೩೦ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮೊದಲ ದಿನವೇ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ಸುಮಾರು ೧೦ ಕಿಲೋಮೀಟರ್ ಉದ್ದ ನಡೆಯಲಿದ್ದು, ಇದರಲ್ಲಿ ಬೆಂಗಳೂರು ಉತ್ತರದ ಮೂರು ವಿಧಾನಸಭಾ ಕ್ಷೇತ್ರಗಳನ್ನು ಸುಮಾರು ೪೫ ನಿಮಿಷಗಳಲ್ಲಿ ಕ್ರಮಿಸಲಾಗುವುದು' ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ ೩೦ ರಂದು ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಮಧ್ಯಾಹ್ನ ಚನ್ನಪಟ್ಟಣದಲ್ಲಿ ಎರಡನೇ ಸಾರ್ವಜನಿಕ ಸಭೆ, ಸಂಜೆ ೫ ಗಂಟೆಗೆ ಬೇಲೂರಿನಲ್ಲಿ ಮೂರನೇ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಇದಾದ ನಂತರ ಮೈಸೂರು ನಗರದಲ್ಲಿಯೂ ರೋಡ್ ಶೋ ನಡೆಸಬಹುದು ಎನ್ನಲಾಗುತ್ತಿದೆ.

ಮೊಕದ್ದಮೆಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ: ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ, ಏ. ೨೭: ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಳು ಮತ್ತು ಸಿವಿಲ್ ಮೊಕದ್ದಮೆಗಳ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಂತೆ ಜಿಲ್ಲಾ ನ್ಯಾಯಾಲಯಗಳಿಗೆ ಗುರುವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು, ಸುಪ್ರೀಂ ಕೋರ್ಟ್ನ ಇ-ಸಮಿತಿಯು ೨೦೨೧ರ ಸೆಪ್ಟೆಂಬರ್ ೨೪ರಂದು ಡಿಜಿಟಲ್ ಸಂರಕ್ಷಣೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಹೊರಡಿಸಿದೆ ಎಂಬುದನ್ನು ಗಮನಿಸಿತು. ನ್ಯಾಯಾಂಗ ಪ್ರಕ್ರಿಯೆಯ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಎಲ್ಲಾ ದಾಖಲೆಗಳ ಸರಿಯಾದ ರಕ್ಷಣೆ ಮತ್ತು ನಿಯಮಿತ ನವೀಕರಣವನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರಿ ಮತ್ತು ಹೊಣೆಗಾರಿಕೆಯ ದೃಢವಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಪೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಂತ್ರಜ್ಞಾನ ಮತ್ತು ಕಾನೂನಿನ ನಡುವೆ ಇದೀಗ ವ್ಯಾಪಕ ಸಂಬAಧ ಏರ್ಪಟ್ಟಿದೆ. ಪರಸ್ಪರ ಕ್ರಿಯೆಯನ್ನು ಸೂಚಿಸುವ ಪ್ರವೃತ್ತಿಗಳೊಂದಿಗೆ ವಿವಾದ ಪರಿಹಾರ ಮತ್ತು ನ್ಯಾಯನಿರ್ಣಯದ ವ್ಯವಸ್ಥೆಗಳೊಂದಿಗೆ ತಂತ್ರಜ್ಞಾನವು ಸದ್ಯದ ಸಮಯದಲ್ಲಿ ಹೆಚ್ಚು ಆವರಿಸಿಕೊಂಡಿದೆ ಎಂದಿದೆ. ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಮತ್ತು ಸಿವಿಲ್ ಮೊಕದ್ದಮೆಗಳಲ್ಲಿನ ದಾಖಲೆಗಳ ಡಿಜಿಟಲೀಕರಣವನ್ನು ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ತ್ವರಿತವಾಗಿ ಕೈಗೊಳ್ಳಬೇಕು. ಇದನ್ನು ಉಚ್ಚ ನ್ಯಾಯಾಲಯಗಳ ರಿಜಿಸ್ಟಾçರ್ ಜನರಲ್ ಖಚಿತಪಡಿಸಿಕೊಳ್ಳಬೇಕು. ಮೇಲಾಗಿ ಕಾನೂನಿನೊಳಗೆ ಮೇಲ್ಮನವಿ ಸಲ್ಲಿಸಲು ಸೂಚಿಸಲಾದ ಸಮಯದೊಳಗೆ ಈ ಕೆಲಸವಾಗಬೇಕು ಎಂದು ಪೀಠ ಹೇಳಿದೆ.