ಚೆಯ್ಯಂಡಾಣೆ, ಏ. ೨೭: ಕರಡ ಮೂಲಕ ಹರಿದು ಬರುವ ಹೊಳೆಯ ನೀರು ಎಡಪಾಲದ ತುಟೆಕಂಡಿ ಸೇತುವೆಯ ಸಮೀಪ ಬಿಸಿಲ ಧಗೆಯಿಂದ ಬತ್ತಿ ಹೋಗಿದ್ದು, ಎಡಪಾಲ ಗ್ರಾಮಸ್ಥರು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗಳಲ್ಲಿ ತೋಡಿರುವ ಬಾವಿ, ಬೋರ್ವೆಲ್ ಹಾಗೂ ಕೆರೆಗಳು ಬಿಸಿಲಿನ ತಾಪಕ್ಕೆ ಬತ್ತಿದ್ದು ಕುಡಿಯುವ ನೀರಿನ ಅಭಾವ ಉಂಟಾಗಿದೆ. ಸ್ಕೂಟರ್, ಸೈಕಲ್, ಪಿಕ್‌ಅಪ್ ಮೂಲಕ ನೀರನ್ನು ಮನೆ ಮನೆಗೆ ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿದೆ. ಎಡಪಾಲದ ಗ್ರಾಮಸ್ಥ ಕೂತಂಬಟ್ಟಿ ಆಲಿ ಸ್ಕೂಟಿ ಮೂಲಕ ನೀರನ್ನು ಸಾಗಿಸುತಿದ್ದ ಸಂದರ್ಭ ‘ಶಕ್ತಿ’ ಅಭಿಪ್ರಾಯ ಬಯಸಿದಾಗ ಸುಮಾರು ೨೦ ವರ್ಷಕ್ಕೂ ಮೊದಲು ಎಡಪಾಲದಲ್ಲಿ ಬಾವಿ, ಬೋರ್ವೆಲ್‌ಗಳ ಸಂಖ್ಯೆ ಕಡಿಮೆ ಇತ್ತು. ಅಂದು ನೀರನ್ನು ಸೈಕಲ್ ಮುಖಾಂತರ ನೀರು ದೊರೆಯುವ ಬಾವಿಯಿಂದ ಮನೆಗೆ ಕೊಂಡೊಯ್ಯುತ್ತಿದ್ದೆವು. ಇದೀಗ ಒಂದೋ ಎರಡೂ ಬಾವಿಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಇದೆ. ಅದು ಕೂಡ ತುಂಬಾ ದೂರದಲ್ಲಿದ್ದು ಅದನ್ನು ಸ್ಕೂಟಿ ಮುಖಾಂತರ ಮನೆಗೆ ಕೊಂಡೊಯ್ಯುತ್ತಿದ್ದೇವೆ.
ಇನ್ನು ಕೂಡ ಒಂದು ವಾರ ಇದೇ ರೀತಿಯಲ್ಲಿ ಬಿಸಿಲು ಇದ್ದರೆ ಆ ನೀರು ಕೂಡ ಬತ್ತಿ ಹೋಗುವುದರಲ್ಲಿ ಸಂಶಯವಿಲ್ಲವೆAದರು. ಜಲ ಜೀವನ್ ಮಿಷನ್ ಯೋಜನೆ ಪೂರ್ತಿಯಾಗಿಲ್ಲ. ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಂಡು ಕಾಮಗಾರಿ ಪೂರ್ತಿಯಾಗಿಲ್ಲ.
ಪೂರ್ತಿಯಾದರೆ ಜನರ ತೊಂದರೆಗೆ ಮುಕ್ತಿ ದೊರೆಯುವ ಆಶ್ವಾಸನೆಯಲ್ಲಿ ದಿನ ದೂಡುತ್ತಿರುವ ಗ್ರಾಮಸ್ಥರು. ತೂಟ್ಟೆಕಂಡಿ ಸೇತುವೆಯ ಸಮೀಪ ಜಾಕ್‌ವೆಲ್ ನಿರ್ಮಿಸುತ್ತಿದ್ದು ಬತ್ತಿ ಹೋಗಿರುವ
(ಮೊದಲ ಪುಟದಿಂದ) ಹೊಳೆಗೆ ಜಾಕ್ ವೆಲ್ ನಿರ್ಮಿಸಿ ಏನು ಪ್ರಯೋಜನವೆಂದು ಗ್ರಾಮಸ್ಥರು ತಮ್ಮ ಅಸಮಾಧಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಬರದ ಛಾಯೆ, ಒಣಗಿದ ಗಿಡಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲ ಧಗೆಗೆ ಸ್ಥಳೀಯ ಬೆಳೆಗಾರರಾದ ಕೆ.ಇ. ಮಮ್ಮದ್, ಸಮದ್, ಕೆ.ವೈ. ಹನೀಫಾ, ಕೆ.ಎಸ್. ಖಾಲೀದ್, ಆಲಿ, ವೈ.ಎಂ. ಹಸನ್, ದಿ: ಸೂಫಿ ಹಾಜಿ, ಕೆ.ಸಿ. ಮಮ್ಮು ಅವರುಗಳ ಕಾಫಿ ಗಿಡಗಳು, ಒಳ್ಳೆಮೆಣಸು ಬಳ್ಳಿ, ಏಲಕ್ಕಿ, ಅಡಿಕೆ, ಬಾಳೆಗಿಡಗಳು ಒಣಗುತ್ತಿದ್ದು, ತೋಟಕ್ಕೆ ನೀರು ಹಾಯಿಸಲು ನದಿ, ಹೊಳೆ, ಕೆರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಮಳೆಗಾಗಿ ದೇವರಲ್ಲಿ ಮೊರೆ ಹೋಗಿದ್ದಾರೆ.
ಅಲ್ಪ ಸ್ವಲ್ಪ ಮಳೆ: ಕಳೆದ ಮೂರು ನಾಲ್ಕು ದಿನಗಳಿಂದ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು, ೧೦ ಸೆಂಟ್, ೧೫ ಸೆಂಟ್ ಮಳೆ ಆಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಮುಂದಿನ ವರ್ಷದ ಫಸಲಿಗೆ ತೊಂದರೆ
ತೋಟದ ಬದುಕನ್ನು ನಂಬಿ ಬದುಕು ಕಟ್ಟಿಕೊಳ್ಳುವ ಬೆಳಗಾರರು ಕಂಗಾಲಾಗಿದ್ದಾರೆ. ಹೊಸ ಗಿಡಗಳನ್ನು ಬೆಳೆದು ಫಸಲು ಪಡೆಯಲು ಕನಿಷ್ಟ ೧೦ ವರ್ಷಗಳಾದರೂ ಬೇಕು. ಕಾಫಿಗೆ ಪ್ರಸ್ತುತ ಉತ್ತಮ ಬೆಲೆ ಇದೆ. ಮುಂದಿನ ವರ್ಷ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. -ಅಶ್ರಫ್